ಯಾದಗಿರಿ: ಜಿಲ್ಲೆಗೆ ವಲಸೆ ಕಾರ್ಮಿಕರು ಆಗಮಿಸುತ್ತಿದ್ದು, ಮಹಾರಾಷ್ಟ್ರದಿಂದ ಇಲ್ಲಿಗೆ ಆಗಮಿಸಿದ್ದ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಜೀವನ ಬಂಡಿ ನಡೆಸಲು ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸಕ್ಕೆಂದು ಹೋಗಿದ್ದ ಕೂಲಿ ಕಾರ್ಮಿಕರು ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುತ್ತಿದ್ದಾರೆ. ಅದರಂತೆ ಇಂದು ಜಿಲ್ಲೆಗೆ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಆಗಮಿಸಿದ್ದು, ಇವರ ಪೈಕಿ ಮೂರು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಎಂ. ಕುರ್ಮಾ ರಾವ್, ಪಿ-1139 ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದ 30 ವರ್ಷದ ವ್ಯಕ್ತಿ, ಪಿ-1140 ಶಹಾಪುರ ತಾಲೂಕಿನ ಚಂದಾಪುರ ಕೆಳಗಿನ ತಾಂಡದ 22 ವರ್ಷದ ಯವಕ, ಪಿ-1141 ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ 34 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಮಾಹಿತಿ ನೀಡಿದರು.
ಕೊರೊನಾ ಸೋಂಕಿತರ ಪ್ರಯಾಣದ ವಿವರ:
- ಪಿ-1139 ಮೇ 10 ರಂದು ಮಹಾರಾಷ್ಟ್ರದ ಥಾಣೆಯಿಂದ ಕಾಲ್ನಡಿಗೆಯಲ್ಲಿ ಬಂದಿದ್ದ
- ಪಿ-1141 ಕೂಡ ಅದೇ ದಿನದಂದು ಥಾಣೆಯಿಂದ ಕಾರಿನಲ್ಲಿ ಬಂದಿದ್ದ
- ಪಿ-1140 ಮೇ 9 ರಂದು ಗೂಡ್ಸ್ ವಾಹನದಲ್ಲಿ ಮಹಾರಾಷ್ಟ್ರದ ಮುಂಬೈ ಮೂಲಕ ಜಿಲ್ಲೆಗೆ ಬಂದಿದ್ದ
- ಪಿ-1140 ಮೇ 9 ರಂದು ಚಂದಾಪುರ ಕೆಳಗಿನ ತಾಂಡದಲ್ಲಿ, ಪಿ-1139 ಮೇ10 ರಂದು ಕನ್ಯಾಕೋಳೂರು ಗ್ರಾಮದಲ್ಲಿ ಓಡಾಡಿದ್ದಾರೆ ಎನ್ನಲಾಗುತ್ತಿದೆ. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕ್ವಾರಂಟೈನ್ ವಿವರ:
- ಪಿ-1140 ಶಹಾಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದ ರಾಣಿ ಚೆನ್ನಮ್ಮ ವಸತಿ ಶಾಲೆಯ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
- ಪಿ-1139 ಹಾಗೂ ಪಿ-1141ಶಹಾಪುರ ತಾಲೂಕಿನ ಕನ್ಯಾಕೋಳೂರ ಬಳಿಯ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದ್ದು, ಇವರ ಗಂಟಲು ದ್ರವವನ್ನು ಕಲಬುರಗಿಯ ಲ್ಯಾಬ್ಗೆ ಕಳಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ.
ಸೋಂಕು ಹೆಚ್ಚಾದ ಪರಿಣಾಮ ಚಂದಾಪುರ ಕೆಳಗಿನ ತಾಂಡ ಹಾಗೂ ಕನ್ಯಾಕೋಳೂರು ಗ್ರಾಮ ಸೀಲ್ಡೌನ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಅಂತಾರಾಜ್ಯಗಳಿಂದ ಆಗಮಿಸುತ್ತಿದ್ದ ವಲಸೆ ಕಾರ್ಮಿಕರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಭೀತಿ ಹೆಚ್ಚಾಗಿದೆ.