ಗುರುಮಠಕಲ್ : ನಗರದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಸಾಲು ಸಾಲು ಕಳ್ಳತನ, ದರೋಡೆ ಪ್ರಕರಣಗಳಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ನಿರ್ಮಾಣವಾಗಿದೆ.
ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ದರೋಡೆ ಪ್ರಕರಣ ಹೆಚ್ಚಾಗಿದ್ದು, ಸರಕಳ್ಳತನ, ದಿನಸಿ ಅಂಗಡಿ ಬೀಗ ಮುರಿದು ಅಂಗಡಿಯಲ್ಲಿದ್ದ 70 ಸಾವಿರ ಹಣ ಹಾಗೂ ದಿನಸಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಗುರುಮಠಕಲ್ ಪಟ್ಟಣದಲ್ಲಿರುವ ನರಸರೆಡ್ಡಿ ಪಾಟೀಲ್ ಗಡ್ಡೆಸುಗೂರು ಅವರಿಗೆ ಸೇರಿರುವ ವೈನ್ ಶಾಪ್ ಬೀಗ ಮುರಿದು 45 ಸಾವಿರ ಹಣ ಹಾಗೂ ಮಹತ್ವದ ದಾಖಲೆಗಳನ್ನು ದೋಚಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಾರ್ನಲ್ಲಿ ಆಗಮಿಸಿದ ಕಳ್ಳರ ಗ್ಯಾಂಗ್ ವೈನ್ ಶಾಪ್ ಬೀಗ ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಫೋಟೋ ಸ್ಟುಡಿಯೋ, ಕಿರಣ ಅಂಗಡಿ, ಹೋಟೆಲ್, ಪಾನ್ ಶಾಪ್, ವೈನ್ ಶಾಪ್, ಮನೆಗಳು, ಬೈಕ್, ಜಾನುವಾರು ಸೇರಿದಂತೆ ಅನೇಕ ಕಳ್ಳತನ ಪ್ರಕರಣಗಳು ಪಟ್ಟಣದಲ್ಲಿ ನಡೆದಿರುವ ಉದಾಹರಣೆಗಳು ಇವೆ. ಹೀಗಿರುವಾಗ ಮತ್ತೆ ಕಳ್ಳರ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಆತಂಕದಲ್ಲಿ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಗುರುಮಠಕಲ್ ಪಟ್ಟಣದ ಪೊಲೀಸ್ ರಾಣೆ ಪಿಐ ಖಾಜಾ ಹುಸೇನ್ ಅವರಿಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳೀಯ ಅಂಗಡಿ ಮಾಲೀಕರು ಮಾನವಿ ಮಾಡಿದರು.
ಇದನ್ನೂ ಓದಿ: ಮುಲ್ಕಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ, ಆರೋಪಿ ಅರೆಸ್ಟ್
ಸ್ಥಳೀಯ ಪೊಲೀಸ್ ಠಾಣೆಗೆ ಹಲವಾರು ದೂರುಗಳನ್ನು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಡಿಲ್ಲ. ಪೊಲೀಸರಿಗೆ ಸಾರ್ವಜನಿಕ ಜವಾಬ್ದಾರಿ ಇಲ್ಲ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.