ಸುರಪುರ : ನಗರದ ಹಳೆ ತಹಶೀಲ್ದಾರ್ ಕಚೇರಿಯ ಕಟ್ಟಡಕ್ಕೆ ಹೊಂದಿರುವ ಉಪ ಅಂಚೆ ಹಾಗೂ ಪಿಎಲ್ಡಿ ಬ್ಯಾಂಕ್ ಶಾಖೆಯೂ ಸೇರಿ ಇತರೆ ಕಚೇರಿಗಳ ಛಾಪಾ ಕಾಗದ ಮುದ್ರಾಂಕದ ಸ್ಥಳವಾಗಿರುವ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಸಾರ್ವಜನಿಕರು ಜೀವ ಭಯದಲ್ಲೇ ಇಲ್ಲಿಗೆ ಬರಬೇಕಾಗಿದೆ.
ಕಟ್ಟಡದ ಛಾವಣಿ ಸಂಪೂರ್ಣ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ಅಲ್ಲದೆ ಎಲ್ಲಾ ಕಚೇರಿಗಳ ಮೇಲ್ಛಾವಣಿಗಳು ಸೋರುತ್ತಿವೆ. ಮಳೆಗಾಲವಾಗಿದ್ದರಿಂದ ಕಚೇರಿಯಲ್ಲಿ ನೀರು ನಿಲ್ಲುವಂತಾಗಿದೆ. ತಾಲೂಕು ಆಡಳಿತ ಇದರ ಬಗ್ಗೆ ಈವರೆಗೂ ಗಮನ ಹರಿಸದೆ ನಿರ್ಲಕ್ಷ್ಯ ತೋರಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಕಟ್ಟಡದ ಅವಸ್ಥೆಯ ಕುರಿತು ಸ್ಥಳೀಯ ಮುಖಂಡ ಆನಂದ ಲಕ್ಷ್ಮಿಪುರ ಮಾತನಾಡಿ, ಕೂಡಲೇ ಕಟ್ಟಡ ದುರಸ್ಥಿಗೊಳಿಸಬೇಕು. ಇಲ್ಲವಾದ್ರೆ ಯಾವುದೇ ಅನಾಹುತ ಸಂಭವಿಸಿದ್ರೆ ಅದಕ್ಕೆ ತಾಲೂಕು ಆಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.