ಸುರಪುರ: ದೇಶ ಹಾಗೂ ರಾಜ್ಯದಲ್ಲಿ ಜಾರಿಗೆ ತರುತ್ತಿರುವ ರೈತ ಕಾಯ್ದೆ ವಿರೋಧಿಸಿ ಸಾಮೂಹಿಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರೈತ ಹೋರಾಟಗಾರರು ಮಾತನಾಡಿ, ಸರ್ಕಾರಗಳು ಇಂದು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿವೆ. ಇದರಿಂದ ದೇಶದಲ್ಲಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದು, ಕೂಡಲೇ ರೈತ ವಿರೋಧಿ ಕಾಯ್ದೆ ಜಾರಿಯನ್ನು ಕೈಬಿಡುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪರಿಹಾರ ಧನ ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೆ ನಯಾ ಪೈಸೆ ಹಣ ಜಮೆಯಾಗಿಲ್ಲ. ಸುಳ್ಳು ಭರವಸೆಗಳ ಮೂಲಕ ರೈತರು, ಕಾರ್ಮಿಕರನ್ನು ನಂಬಿಸುವ ಕೆಲಸವನ್ನು ಮೊದಲು ಸರ್ಕಾರ ನಿಲ್ಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದು, ಕೃಷಿ ಚಟುವಟಿಕೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ವಿತರಿಸುವಂತೆ ಆಗ್ರಹಿಸಿದರು. ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದರು.