ಯಾದಗಿರಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ತಮ್ಮ ಕ್ಷೇತ್ರದ ಕಾರ್ಮಿಕರು ಪರದಾಡುತ್ತಿದ್ದು, ಅವರನ್ನ ತಮ್ಮೂರಿಗೆ ಕರೆತರಲು ಸಹಕರಿಸಿ ಅಂತಾ ಸಿಎಂ ಯಡಿಯೂರಪ್ಪಗೆ ಶಾಸಕ ರಾಜುಗೌಡ ಕೈಮುಗಿದು ಬೇಡಿಕೊಂಡಿದ್ದಾರೆ.
ಜಿಲ್ಲೆಯ ಸುರಪುರ ಕ್ಷೇತ್ರದ ಬಿಜೆಪಿ ಶಾಸಕರಾದ ರಾಜುಗೌಡ ರತ್ನಗಿರಿಯಲ್ಲಿರುವ ಕಾರ್ಮಿಕರು ವಿಡಿಯೋ ಮಾಡಿ ನನಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ, ಆದ್ರೆ ನಾನೀಗ ಅಸಹಾಯಕನಾಗಿದ್ದೇನೆ. ಹೀಗಾಗಿ ಮುಖ್ಯಮಂತ್ರಿಗಳು ಅನುಮತಿ ನೀಡಿ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಬೇಕು. ಸಾಕಷ್ಟು ಮಂದಿಗೆ ರಾಜ್ಯಕ್ಕೆ ಕರಿಸಿಕೊಂಡಿದ್ದಿರಿ, ಈಗಾಗಲೇ ವಿದೇಶಗಳಿಂದಲೂ ಸಾವಿರಾರು ಜನ ರಾಜ್ಯಕ್ಕೆ ಮರಳಿದ್ದಾರೆ. ಹಾಗೆಯೇ ನಮ್ಮ ಕ್ಷೇತ್ರದ ಜನರ ನೋವಿಗೂ ಸ್ಪಂದಿಸಿ ಎಂದು ಕಣ್ಣೀರು ಹಾಕುತ್ತ ಸಿಎಂಗೆ ಅಲವತ್ತುಕೊಂಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಗುಡಿಸಲಲ್ಲೇ ಕಾರ್ಮಿಕರು ಪರದಾಡುತ್ತಿದ್ದಾರೆ. ಮಳೆ ಬಂದು ನೀರಲ್ಲಿ ಮಲಗುವಂತಾಗಿದೆ. ತಿನ್ನೋಕೆ ಅನ್ನ ಸಹ ಅವರಿಗೆ ಸಿಗುತ್ತಿಲ್ಲ. ಸಿಎಂ ಅವರು ಅನುಮತಿ ಕೊಡಿಸಿದ್ರೆ ನಾನೇ ವಾಹನ ವ್ಯವಸ್ಥೆ ಮಾಡಿ ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ ಶಾಸಕ ರಾಜುಗೌಡ.
ಕಾರ್ಮಿಕರು ಕೊರೊನಾದಿಂದ ಸಮಸ್ಯೆ ಅನುಭವಿಸಿದ್ದಕ್ಕಿಂತ ಹೆಚ್ಚಾಗಿ ಹಸಿವಿನಿಂದ ಕಂಗೆಟ್ಟಿದ್ದಾರೆ. ಅವರನ್ನು ಇಲ್ಲಿಗೆ ಕರೆದುಕೊಂಡು ಬರೋದು ಆಗಿಲ್ಲ ಅಂದ್ರೆ ಅವರು ಇರುವ ಜಾಗದಲ್ಲೇ ಅವರಿಗೆ ಬೇಕಾದಂತ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿಸಿ ಎಂದು ರಾಜುಗೌಡ ಸಿಎಂಗೆ ಮನವಿ ಮಾಡಿದ್ದಾರೆ.