ಸುರಪುರ: ತಾಲೂಕಿನಾದ್ಯಂತ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ನಗನೂರು-ಖಾನಾಪುರ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಭಾರೀ ನಷ್ಟವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆ ಅರ್ಭಟಕ್ಕೆ ಜನರು ನಲುಗಿ ಹೋಗಿದ್ದು, ರಾತ್ರಿಯಿಡೀ ಎದ್ದು ಕುಳಿತು ಜಾಗರಣೆ ಮಾಡುವಂತಾಗಿದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ತಡರಾತ್ರಿಯಿಂದ ನಿದ್ದೆ ಮಾಡದೆ ಜನರು ಹೈರಾಣಾಗಿದ್ದಾರೆ.
ನಗನೂರ ಗ್ರಾಮದ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ಹೊಕ್ಕಿದ್ದರಿಂದ ಮನೆಯಲ್ಲಿನ ನೀರು ಖಾಲಿ ಮಾಡಲು ಪರದಾಟ ನಡೆಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಕಾರ್‌ಗಳಿಗೆ ನೀರು ಸೇರ ಕೆಟ್ಟು ಹೋಗಿರುವ ಭೀತಿ ಜನರಲ್ಲಿ ಕಾಡುತ್ತಿದೆ. ಇದುವರೆಗೂ ಗ್ರಾಮಕ್ಕೆ ಯಾವ ಅಧಿಕಾರಿಗಳೂ ಭೇಟಿ ನೀಡದಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.