ಸುರಪುರ: ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಕೆಂಭಾವಿ ಉಪ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕೋವಿಡ್ ನೆಪದಲ್ಲಿ ಕಲ್ಯಾಣ ಕರ್ನಾಟಕ ಭಾಗದ 2020-21ರ ಆರ್ಥಿಕ ವರ್ಷದ ಹುದ್ದೆಗಳು, ಬ್ಯಾಕ್ಲಾಗ್ ಮತ್ತು ನೇರ ನೇಮಕಾತಿ ಹುದ್ದೆಗಳ ಭರ್ತಿಗಳನ್ನು ತಡೆ ಹಿಡಿದು ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಅನ್ಯಾಯ ಮಾಡುತ್ತಿದೆ. ತಡೆ ನೀಡುವುದಾದರೆ ರಾಜ್ಯದ ಎಲ್ಲಾ ಭಾಗದಲ್ಲಿ ನಡೆಯುತ್ತಿರುವ ನೇಮಕಾತಿಗಳಿಗೆ ತಡೆ ನೀಡಬಹುದಿತ್ತು. ಪ್ರತಿ ಬಾರಿಯೂ ಸರ್ಕಾರದ ಇಂತಹ ನೆಪಗಳಿಂದ ಕಲ್ಯಾಣ ಕರ್ನಾಟಕವೇ ಬಲಿಯಾಗತ್ತದೆ ಎಂದು ಕಿಡಿಕಾರಿದರು.
371ಜೆ ಕಲಂ ಈ ಭಾಗದಲ್ಲಿ ಸಮರ್ಪಕ ಅನುಷ್ಠಾನವಾಗಿಲ್ಲ. ಈ ಭಾಗಕ್ಕೆ ಸಂಪುಟ ವಿಸ್ತರಣೆಯಲ್ಲೂ ಅನ್ಯಾಯ ಮಾಡಲಾಗಿದೆ. ಪ್ರಮುಖ ಖಾತೆಗಳು ಮುಂಬೈ ಕರ್ನಾಟಕ, ಮೈಸೂರು ಕರ್ನಾಟಕದ ಪಾಲಾಗಿವೆ. ರಾಜಕಾರಣ ಸೇರಿದಂತೆ ಎಲ್ಲಾ ರಂಗದಲ್ಲೂ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಕೊನೆ ಯಾವಾಗ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.