ಯಾದಗಿರಿ: ಆತ್ಮಹತ್ಯೆಯು ಸಾಮಾಜಿಕ ವ್ಯವಸ್ಥೆಗೆ ಅಂಟಿದ ಒಂದು ಕಳಂಕವಾಗಿದೆ. ಅದು ಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಗಪ್ರಿಯಾ ಆರ್. ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಇಲಾಖೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 70 ವರ್ಷದ ಹಿಂದೆ ಯಾವುದೇ ಸೌಲಭ್ಯ ಇರಲಿಲ್ಲ. ಆದರೂ ಜನರು ಖುಷಿಯಾಗಿದ್ದರು. ಆದರೆ ಇಂದು ಹಲವು ಸೌಲಭ್ಯಗಳಿದ್ದರೂ ಜನರು ಮಾನಸಿಕವಾಗಿ ಸಂತೋಷವಾಗಿಲ್ಲ ಎಂದರು.
ನಂತರ ಮಾತು ಮುಂದುವರೆಸಿ, ಇಂದು ಆತ್ಮಹತ್ಯೆಗೆ ಬಡತನ ಒಂದೇ ಕಾರಣವಲ್ಲ. ಶ್ರೀಮಂತರು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೊಬೈಲ್, ವಾಟ್ಸ್ ಆಪ್, ಇಸ್ಟಾ ಗ್ರಾಮ್, ಫೇಸ್‍ಬುಕ್‍ನಲ್ಲಿ ತಮಗೆ ಬಹಳಷ್ಟು ಜನ ಸ್ನೇಹಿತರು ಇದ್ದಾರೆ ಎಂದು ತೋರಿಸಿಕೊಳ್ಳುತ್ತಾರೆ. ಆದರೆ ನಿಜವಾಗಿ ಕಡಿಮೆ ಜನ ಸ್ನೇಹಿತರು ಇರುತ್ತಾರೆ. ಹೀಗಾಗಿ ಅವರು ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಲು ಆಗದೆ ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.
ತಮ್ಮ ಜೀವನದಲ್ಲಿ ಘಟಿಸುವ ಸಮಸ್ಯೆಗಳ ಬಗ್ಗೆ ಸರಿಯಾಗಿ ನಿರ್ವಹಣೆ ಮಾಡಲು ಬಂದರೆ ಅವರು ಆತ್ಮಹತ್ಯೆ ಮಾಡಿಕೊಳ್ಳವುದಿಲ್ಲ. ಸಮಸ್ಯೆಗಳು ಇಲ್ಲವೇ ಕಾರ್ಯಭಾರದ ಒತ್ತಡವೇ ಆತ್ಮಹತ್ಯೆಗೆ ಮುಖ್ಯ ಕಾರಣವಾಗುತ್ತದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಒಳಗಾಗುತ್ತಾರೆ. ಜೀವನ ಮೌಲ್ಯಯುತವಾಗಿದೆ. ಅದನ್ನು ಹಾಳು ಮಾಡಿಕೊಳ್ಳದೆ ಸಮಸ್ಯೆಗಳ ಕುರಿತು ಚರ್ಚಿಸಬೇಕು. ಸಮಸ್ಯೆಗಳ ನಿರ್ವಹಣೆಯಿಂದ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯವಿದೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, ಜಗತ್ತಿನಲ್ಲಿ ಪ್ರತಿವರ್ಷ 8 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಖಿನ್ನತೆ, ಕುಟುಂಬ ಕಲಹ, ವಿವಾಹ ವಿಚ್ಛೇದನ, ವೈವಾಹಿಕ ಸಮಸ್ಯೆಗಳು, ಪರೀಕ್ಷೆಯಲ್ಲಿ ಅನುತ್ತೀರ್ಣ, ರ್ಯಾಗಿಂಗ್, ಮಾನಸಿಕ ಕಾಯಿಲೆ, ನಿರುದ್ಯೋಗ ಸಮಸ್ಯೆಗಳು, ಮಾರಕ ರೋಗಗಳು ಸೇರಿದಂತೆ ಇತರೆ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನೇಣು ಹಾಕಿಕೊಳ್ಳುವುದು, ವಿಷ ಸೇವನೆ, ನೀರಲ್ಲಿ ಬೀಳುವುದು, ಡ್ರಗ್ಸ್ ಸೇವನೆ, ಬೆಂಕಿ ಹಚ್ಚಿಕೊಳ್ಳುವುದು, ರೋಗ ಪೀಡಿತರು ಹಾಗೂ ಅಧಿಕಾರಿ ವರ್ಗವು ಅಸಹಜವಾಗಿ ಆತ್ಮಹತ್ಯೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಮನೋವೈದ್ಯ ಡಾ.ಉಮೇಶ ಮಾತನಾಡಿ, ಆತ್ಮಹತ್ಯೆಯೂ ಎಲ್ಲ ದೇಶಗಳಲ್ಲಿಯೂ ಇದೆ. ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಮಾಡಲಾಗುತ್ತಿದೆ. ದೇಶದಲ್ಲಿ 15ರಿಂದ 30 ವಯಸ್ಸಿನವರಲ್ಲಿ ಆತ್ಮಹತ್ಯೆಯು ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಖಿನ್ನತೆ, ಒತ್ತಡ. ಸ್ಕಿಜೋಪ್ರೆನಿಯಾವು ಒಂದು ಮಾನಸಿಕ ಕಾಯಿಲೆಯಾಗಿದೆ. ಹಲವು ಸಮಸ್ಯೆಗಳ ಒತ್ತಡದ ಮೂಲಕ ವಿಶ್ವಾಸ, ಆತ್ಮಸ್ಥೈರ್ಯ ಕಳೆದುಕೊಳ್ಳುವ ರೈತರು, ಪೊಲೀಸರು, ಅಧಿಕಾರಿಗಳು, ವೈದ್ಯರು ಹಾಗೂ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು, ಒತ್ತಡ ನಿವಾರಣೆಯ ವಿಧಾನ ತಿಳಿದುಕೊಳ್ಳಬೇಕು ಎಂದರು.
ಸಕಾರಾತ್ಮಕ ಆಲೋಚನೆ ಮಾಡಿ, ಯೋಗಾಸನ, ವ್ಯಾಯಾಮ, ಸಂಗೀತ, ಸಾಹಿತ್ಯ, ಧ್ಯಾನ ಮಾಡಿ ಸದೃಢ ಮನಸ್ಸು ಹೊಂದಬೇಕು. ಪ್ರತಿ ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸೆ ನೀಡಲಾಗುತ್ತದೆ. ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ 1ನೇ ಮಂಗಳವಾರ ಶಹಾಪುರ, 2ನೇ ಮಂಗಳವಾರ ಸುರಪುರ, 3ನೇ ಮಂಗಳವಾರ ಗುರುಮಠಕಲ್, 4ನೇ ಮಂಗಳವಾರ ಹುಣಸಗಿ ಹಾಗೂ 1ನೇ ಶುಕ್ರವಾರ ವಡಗೇರಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾನಸಿಕ ತಜ್ಞರಿಂದ ಸಲಹೆ, ಚಿಕಿತ್ಸೆ ನೀಡಲಾಗುತ್ತಿದೆ. ಉಚಿತ ಸಹಾಯವಾಣಿ ಸಂಖ್ಯೆ 104 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.