ಯಾದಗಿರಿ: ಈ ಹಿಂದೆ ಜಿಲ್ಲೆಗೆ ಮಂಜೂರಾಗಿದ್ದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಯೋಜನೆ ರದ್ದಾಗುವುದಿಲ್ಲ, ಅದು ಮುಂದುವರೆಯಲಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಸ್ಪಷ್ಟಪಡಿಸಿದರು.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನೇರವಾಗಿ ಭೇಟಿಯಾಗಿ ಮನವಿ ಪತ್ರ ನೀಡಿ, ಯೋಜನೆ ಕಾಮಗಾರಿಗೆ ಆದಷ್ಟು ಬೇಗ ಅಡಿಗಲ್ಲು ನೆರವೇರಿಸಲು ತಿಳಿಸಿದ್ದೇನೆ. ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನನ್ನ ಸರ್ಕಾರದಿಂದ ಮಂಜೂರಾದ ಯಾವುದೇ ಯೋಜನೆಗಳನ್ನು ರದ್ದು ಪಡಿಸುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಯೋಜನೆ ಮುಂದುವರಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿದೆ. ಅದರಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
ವಡಗೇರಾ ನೂತನ ತಾಲೂಕಾ ಕೇಂದ್ರವಾಗಿದೆ. ಅಲ್ಲಿರುವ ಹಾಲಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿ ಕೇಂದ್ರವಾಗಿ ಮಾರ್ಪಾಡು ಆಗುವುದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ರಾಜ್ಯದಲ್ಲಿ ಕೊರೊನಾ ಸಮಸ್ಯೆ ನಿಯಂತ್ರಣಕ್ಕೆ ಬಂದ ಮೇಲೆ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಹೈಕಮಾಂಡ್ ಜೊತೆ ಚರ್ಚಿಸಿ ಪಕ್ಷದಲ್ಲಿ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ವಿವಿಧ ಅಧಿಕಾರ ಹಂಚಿಕೆ ಮಾಡಲಿದ್ದಾರೆ. ಈಶಾನ್ಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.