ಯಾದಗಿರಿ : ಪ್ರಸ್ತುತ ವರ್ಷದಲ್ಲಿ ಕೃಷ್ಣಾ ನದಿ ಪ್ರವಾಹ ಸೇರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಆದರೆ, ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಮಾತ್ರ ಜನ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ವರ್ಷದಲ್ಲಿ ಸಂಭವಿಸಿದ ಕೃಷ್ಣಾ ನದಿ ಪ್ರವಾಹ ಸೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಷ್ಟೆಲ್ಲಾ ನೀರಿನ ಮೂಲಗಳಿದ್ದರೂ ಕೂಡ ಸುರಪುರ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಭುಗಿಲೆದ್ದಿದೆ. ಗ್ರಾಮದ ಪಕ್ಕದಲ್ಲೇ ಬೃಹತ್ ಹಿರೆಹಳ್ಳ ತುಂಬಿ ಹರಿಯುತ್ತಿದೆ. ಆದರೂ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಂದ್ರಾಳ ಗ್ರಾಮದ ಪಕ್ಕದಲ್ಲೇ ಹಿರೆಹಳ್ಳ ತುಂಬಿ ಹರಿಯುತ್ತಿದೆ. ಆ ಹಳ್ಳದ ಪಕ್ಕದಲ್ಲೇ ರೈತರ ಜಮೀನುಗಳ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ರಸಗೊಬ್ಬರ ಕ್ರಿಮಿನಾಷಕ ಹಳ್ಳದ ನೀರಿಗೆ ಬೆರಕೆಯಾಗುತ್ತಿದೆ. ಪರಿಣಾಮ ಈ ನೀರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಇದರಿಂದ ಗ್ರಾಮಸ್ಥರು ತಮ್ಮ ಕೆಲಸ ಬಿಟ್ಟು ಕಿ.ಮೀ ಗಟ್ಟಲೆ ದೂರದಿಂದ ನೀರು ತರುವಂತಾಗಿದೆ.
ಇಲ್ಲಿ ಗ್ರಾಪಂ ವತಿಯಿಂದ ಯಾವುದೇ ಶುದ್ಧ ಕುಡಿಯುವ ನೀರಿನ ಘಟಕ ಕೂಡ ಸ್ಥಾಪನೆ ಮಾಡಿಲ್ಲ. ಬಳಸಲು ಯಾವುದೇ ಅಭಾವ ಇಲ್ಲದಿದ್ದರೂ ಕೂಡ ಕುಡಿಯುವ ನೀರಿಗಾಗಿ ಇಲ್ಲಯ ಜನ ಸಂಕಷ್ಟ ಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವ ಮೂಲಕ ಈ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿದೆ.