ಯಾದಗಿರಿ: ಹೈಕೋರ್ಟ್ ತೀರ್ಪು ವಿರೋಧಿಸಿ ಹಿಜಾಬ್ ಧರಿಸಿ ಬಂದರೂ ಅವರನ್ನು ಕಾಲೇಜು ಆಡಳಿತ ಮಂಡಳಿ ಪರೀಕ್ಷೆಗೆ ಕುಳ್ಳಿರಿಸಿದೆ. ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾದಾಗ ಹೊರಕಳುಹಿಸಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದೆ. ಕಾಲೇಜಿನಲ್ಲಿ ಬಿಎಸ್ಸಿ ಪ್ರಥಮ ಸೆಮಿಸ್ಟರ್‌ನ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಆಕ್ಷೇಪ.. ಸತ್ಯಶೋಧನಾ ಸಮಿತಿ ರಚನೆಗೆ ಒತ್ತಾಯ
ಪ್ರಾಚಾರ್ಯರು ಮತ್ತು ಬೇರೆ ಕಾಲೇಜಿನಿಂದ ಬಂದ ಪರೀಕ್ಷಾ ಮೇಲ್ವಿಚಾರಕರ ನಡುವೆ ಕೆಲ ಸಮಯ ಮಾತುಕತೆ ನಡೆದು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು. ಈ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಈ ಬಗ್ಗೆ ಪ್ರಾಚಾರ್ಯರನ್ನು ಪ್ರಶ್ನಿಸಿದಾಗ ವಿದ್ಯಾರ್ಥಿನಿಯರು ಪರೀಕ್ಷೆ ಬರೆದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಉತ್ತರ ನೀಡಿದ್ದಾರಂತೆ. ಪರೀಕ್ಷಾ ಮೇಲ್ವಿಚಾರಕರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಮಾನವೀಯತೆ ದೃಷ್ಟಿಯಿಂದ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ.
ಆದರೆ, ಪ್ರಶ್ನೆ ಪತ್ರಿಕೆ ನೀಡಿದ ಒಂದು ಗಂಟೆ ನಂತರ ಪರೀಕ್ಷಾ ಕೊಠಡಿಗೆ ಆಗಮಿಸಿದ ಪ್ರಾಚಾರ್ಯರು ವಿದ್ಯಾರ್ಥಿನಿಯರಿಗೆ ನೀಡಿದ್ದ ಎಲ್ಲಾ ಪ್ರಶ್ನೆ ಪತ್ರಿಕೆ ವಾಪಸ್ ಪಡೆದಿದ್ದಾರೆ. ನಂತರ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ಮನೆಗೆ ವಾಪಸ್ಸಾಗಿದ್ದಾರೆ.