ಯಾದಗಿರಿ : ಜಿಲ್ಲಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 18,656 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿದ್ದು, ಅದರಲ್ಲಿ 10,164 ವಿದ್ಯಾರ್ಥಿಗಳು ಮತ್ತು 8,492 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಯಾದಗಿರಿಯಲ್ಲಿ 618, ಶಹಾಪುರ-231, ಸುರಪುರ-205 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.
ಶಹಾಪುರ -21, ಸುರಪುರ-18, ಯಾದಗಿರಿ-32 ಸೇರಿದಂತೆ ಒಟ್ಟು 71 ಪರೀಕ್ಷಾ ಕೇಂದ್ರಗಳಿದ್ದವು. ಯಾದಗಿರಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಈ ವೇಳೆ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯುವಂತೆ ಶಿಕ್ಷಕರು ಸೂಚಿಸಿದಾಗ, ವಿದ್ಯಾರ್ಥಿನಿಯರು ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆದಿದ್ದಾರೆ.
ಪ್ರತಿ 20 ವಿದ್ಯಾರ್ಥಿಗಳಿಗೆ ಒಂದು ಬ್ಲಾಕ್ನಂತೆ ಒಟ್ಟು 935 ಕೊಠಡಿಗಳನ್ನು ಮೀಸಲಿಡಲಾಗಿತ್ತು. 250 ವಿದ್ಯಾರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಅಲ್ಲದೇ ಉರ್ದು ಮಾಧ್ಯಮದ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ತೆಗೆದಿಡಲು ಪ್ರತ್ಯೇಕ ಕೇಂದ್ರ ಸ್ಥಾಪನೆ ಮಾಡಲಾಗಿತ್ತು.
ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ, ಮಾಸ್ಕ್ ವಿತರಣೆ, ಆಸನ ಹಾಗೂ ಕುಡಿಯುವ ನೀರು ಸೇರಿ ಇನ್ನಿತರ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಯಮಾನುಸಾರವಾಗಿ ಪರೀಕ್ಷೆ ಜರುಗಿತು.
ಇದನ್ನೂ ಓದಿ: SSLC ಪರೀಕ್ಷೆ: 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು.. ಹಿಜಾಬ್ ತೆಗೆಯದ ಮೇಲ್ವಿಚಾರಕಿ ಅಮಾನತು