ಯಾದಗಿರಿ: ಇಂದಿನಿಂದ ಹೊರ ರಾಜ್ಯ ಸೇರಿದಂತೆ ಎಲ್ಲಾ ಭಕ್ತರಿಗೆ ಶ್ರೀಶೈಲಂನ ಭ್ರಮರಾಂಭ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಕ್ಷೇತ್ರವು ದೇಶದ 12ನೇ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಕೋವಿಡ್ ಮುಂಜಾಗ್ರತೆ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿಂದ ಭಕ್ತರ ದರ್ಶನ ನಿರ್ಬಂಧಿಸಲಾಗಿತ್ತು.
ಆದರೆ, ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ಸಂಪ್ರದಾಯದಂತೆ ನಡೆಸಲಾಗಿತ್ತು. ಈಗ ಪವಿತ್ರ ಶ್ರಾವಣ ಮಾಸ ಹಿನ್ನೆಲೆ ಶುಕ್ರವಾರ ಮಲ್ಲಿಕಾರ್ಜುನ ದೇವಾಲಯವನ್ನು ಸ್ಯಾನಿಟೈಸರ್ ಮಾಡಿ, ಶ್ರೀಶೈಲಂ ಕ್ಷೇತ್ರದ ಭಕ್ತರಿಗೆ ನಿನ್ನೆ ದರ್ಶನಕ್ಕೆ ಅವಕಾಶ ಕೊಡಲಾಗಿತ್ತು.
ಆದರೆ, ಇಂದಿನಿಂದ ಹೊರ ರಾಜ್ಯದ ಹಾಗೂ ಎಲ್ಲಾ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 10 ವರ್ಷದಿಂದ 65 ವರ್ಷದ ಒಳಗಿನ ಭಕ್ತರಿಗೆ ಮಾತ್ರ ದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಭಕ್ತರಿಗೆ ಆಧಾರ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಇಂದಿನಿಂದ ರಾಜ್ಯದ ಭಕ್ತರು ಮಲ್ಲಯ್ಯನ ದರ್ಶನ ಪಡೆದು ಕೃಪೆಗೆ ಪಾತ್ರರಾಗುತ್ತಿದ್ದಾರೆ. ಸಾಮಾಜಿಕ ಅಂತರದ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿದ ಭಕ್ತರಿಗೆ ಮಾತ್ರ ದೇವಸ್ಥಾನದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಕೋವಿಡ್ ಮುಂಜಾಗ್ರತೆ ವಹಿಸಿ ದರ್ಶನ ಪಡೆಯುತ್ತಿದ್ದಾರೆ.
ಜಿಲ್ಲೆಯಿಂದ ಕೂಡ ಪ್ರತಿವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀಶೈಲ ದರ್ಶನಕ್ಕೆ ತೆರಳುತ್ತಿದ್ದರು. ಕೋವಿಡ್ ಹಿನ್ನೆಲೆ ಪವಿತ್ರ ಶ್ರಾವಣ ಮಾಸದಲ್ಲಿ ತಮ್ಮ ಆರಾಧ್ಯದೈವನ ದರ್ಶನ ಭಾಗ್ಯ ಸಿಗದಿರುವುದಕ್ಕೆ ನಿರಾಶರಾಗಿದ್ದರು. ಆದ್ರೆ ಈಗ ಶ್ರಾವಣ ಮಾಸದ ಕೊನೆಯ ದಿನಗಳಲ್ಲಾದರೂ ಈ ಭಾಗ್ಯ ಲಭಿಸಿದ್ದು ಜಿಲ್ಲೆಯ ಭಕ್ತರಲ್ಲಿ ಹರ್ಷ ತಂದಿದೆ.