ಗುರುಮಠಕಲ್: ಸುದೀರ್ಘ ಸಂಘರ್ಷ ಮತ್ತು ಅನೇಕ ಕರಸೇವಕರ ಬಲಿದಾನದ ಬಳಿಕ ಕೋಟ್ಯಂತರ ಹಿಂದುಗಳ ಕನಸು ಫಲಿಸಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ಶಿಲಾನ್ಯಾಸದ ಪ್ರಯುಕ್ತ ಗುರುಮಠಕಲ್ನ ಪ್ರಮುಖ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಲಿರುವ ಹಿನ್ನೆಲೆ, ಗುರುಮಠಕಲ್ನಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶ್ರೀರಾಮನ ಭಕ್ತರು ಗ್ರಾಮದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಇತಿಹಾಸ ಹೀಗಿದೆ:
1990ರ ಅವಧಿಯಲ್ಲಿ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾನಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲು ದೇಶದ್ಯಾಂತ ರಥಯಾತ್ರೆ ನಡೆಸಿರುವ ಇತಿಹಾಸ ಎಲ್ಲರಿಗೂ ತಿಳಿದ ವಿಚಾರ. ಇದು ಆಗ ದೇಶಾದ್ಯಂತ ಹೊಸ ಸಂಚಲನವನ್ನೇ ಉಂಟುಮಾಡಿತು.
ಶ್ರೀರಾಮನ ಭಕ್ತರು ಕೂಡ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಇತಿಹಾಸದ ನೆನಪಿಗಾಗಿ ಗುರುಮಠಕಲ್ನಲ್ಲಿ ರಾಮನ ಜಪ ಮಾಡುವ ಭಕ್ತರು ಅಯೋಧ್ಯೆಯ ಕರಸೇವಕ ವೀರಪ್ಪ ಪ್ಯಾಟಿ ಅವರಿಗೆ ಇಂದು ಸನ್ಮಾನಿಸಿ ವಿಶೇಷ ಗೌರವ ಸಲ್ಲಿಸಿದರು.
1992 ರಲ್ಲಿ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಗೆ ಹೋಗಿದ್ದೆ. ಅಯೋಧ್ಯೆಗೆ ತೆರಳಿ ಕರಸೇವೆ ಕಾರ್ಯಕ್ರಮದಲ್ಲಿ ಎಲ್ಲರಂತೆ ನಾನು ಕೂಡ ಭಾಗಿಯಾಗಿದ್ದೆ. ಪೊಲೀಸರು ಈ ವೇಳೆ ಬಂಧನ ಮಾಡಿ ನನ್ನುನ್ನು ಜೈಲಿನಟ್ಟಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಶ್ರೀರಾಮನ ದರ್ಶನ ಪಡೆಯಲಾಯಿತು. ರಾಮಮಂದಿರ ವಿಚಾರವಾಗಿ ನಾವು ಕೂಡ ಜೈಲು ಸೇರಿದ್ದೇವೆ. ಈಗ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದ್ದು ದೀಪಾವಳಿ ಹಬ್ಬದ ಸಂಭ್ರಮದಂತೆ ಆಚರಣೆ ಮಾಡಲಾಗಿದೆ ಎನ್ನುತ್ತಾರೆ ಕರಸೇವಕ ವೀರಪ್ಪ ಪ್ಯಾಟಿ.
ಸಮಾಜ ಸೇವಕರಾದ ರಾಜಾ ರಮೇಶ್ ಗೌಡ, ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ಸೂರ್ಯನಾರಯಣ, ಬಿಜೆಪಿ ಮುಖಂಡ ಸಾಯಿಬಣ್ಣ ಬೋರಬಂಡಾ, ಹಿಂದು ಯುವ ವೇದಿಕೆ ಅಧ್ಯಕ್ಷ ರವಿಂದ್ರ ರೆಡ್ಡಿ ಪೋತುಲ್, ಬಸವರಾಜ ಸಂಜನೋಳ್, ಆಶೋಕ ಸಂಜನೋಳ್, ರಘು ಗೌಡ, ಪ್ರಭು ಜೋಗಿ, ಮಂಜು ಮನೆ, ಲಕ್ಷ್ಮಣ ಕುಂಬಾರ್, ಶ್ರೀನಿವಾಸ ಯಾದವ್, ಅಭಿ ನಾಯಿಕೋಡಿ, ಲಕ್ಷ್ಮಣ್ ಆಶನಾಳ್, ಶ್ರೀರಾಮನ ಭಕ್ತರು ಹಾಗೂ ಹಿಂದು ಯುವ ವೇದಿಕೆ ಕಾರ್ಯಕರ್ತರು ಮತ್ತು ಮುಖಂಡರು ಇದ್ದರು.