ಯಾದಗಿರಿ: ಗುರುಮಠಕಲ್ ಪಟ್ಟಣಕ್ಕೆ ವಿಶೇಷ ಅನುದಾನ ನೀಡುವಂತೆ ಜಯಕರ್ನಾಟಕ ಸಂಘಟನೆ ವತಿಯಿಂದ ತಹಶೀಲ್ದಾರ್ ಸಂಗಮೇಶ ಜಿಡಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹಿಂದಿನ ಮೈತ್ರಿ ಸರ್ಕಾರವು ಗುರುಮಠಕಲ್ ವಿಧಾನಸಭಾ ವ್ಯಾಪ್ತಿಗೆ ನೀಡಿದ ಅನುದಾನವನ್ನು ಈಗಿನ ಬಿಜೆಪಿ ಸರ್ಕಾರ ತಡೆಹಿಡಿದ ಹಿನ್ನೆಲೆಯಲ್ಲಿ ಈ ಭಾಗದ ಅಭಿವೃದ್ಧಿಯು ಸಂಪೂರ್ಣ ಕುಂಠಿತವಾಗಿದೆ. ಗುರುಮಠಕಲ್ ನಗರ ಸೇರಿದಂತೆ ಒಟ್ಟಾರೆ ತಾಲೂಕಿನ ಅಭಿವೃದ್ಧಿ ಪಡಿಸಲು ತಡೆಹಿಡಿದ ಅನುದಾನ ಹಾಗೂ ಮತ್ತಷ್ಟು ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷರಾದ ನಾಗೇಶ್ ಗದ್ದಿಗಿ ನೇತೃತ್ವದಲ್ಲಿ ಗುರುಮಠಕಲ್ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿವರಿಗೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷರಾದ ನಾಗೇಶ್ ಗದ್ದಿಗಿ, ಗುರುಮಠಕಲ್ ತಾಲೂಕಿನಾದ್ಯಂತ ಹಲವಾರು ಸಮಸ್ಯೆಗಳಿವೆ. ತಾಲೂಕಿಗೆ ಅನುದಾನ ಇಲ್ಲದ ಕಾರಣ ಹಾಗೂ ಹಿಂದೆ ಮೈತ್ರಿ ಸರ್ಕಾರ ನೀಡಿದ ಅನುದಾನವನ್ನು ತಡೆ ಹಿಡಿದ ಕಾರಣ ಈ ಕ್ಷೇತ್ರವು ಅಭಿವೃದ್ಧಿಯಿಂದ ಸಂಪೂರ್ಣ ಕುಂಠಿತವಾಗಿದೆ. ಆದ್ದರಿಂದ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ತಾಲೂಕಿಗೆ ವಿಶೇಷ ಅನುದಾನವನ್ನು ನೀಡಬೇಕು. ಇಲ್ಲದಿದ್ದರೆ ನಮ್ಮ ಜಯ ಕರ್ನಾಟಕ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.