ಗುರುಮಠಕಲ್ (ಯಾದಗಿರಿ): ಪಟ್ಟಣದ ಚಂಡರಕಿ ರಸ್ತೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡ ಎಸ್‌ಎಲ್‌ಟಿ ಪಿಯುಸಿ ವಿಜ್ಞಾನ ಪದವಿ ಪೂರ್ವ ಕಾಲೇಜು 2019-20ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90ರಷ್ಟು ಫಲಿತಾಂಶ ಗಳಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದರೊಂದಿಗೆ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ನರೇಂದ್ರ ರಾಠೋಡ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಭಾಗವಾದ ಗುರುಮಠಕಲ್ ಪಟ್ಟಣದಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರಥಮವಾಗಿ 2019-20ನೇ ಸಾಲಿನ ದ್ವಿತೀಯ ಪದವಿ ಪೂರ್ವ ಪರೀಕ್ಷೆ ಹಾಗೂ ಸಿ.ಬಿ.ಎಸ್.ಸಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮದಿಂದಾಗಿ ಉತ್ತಮ ಫಲಿತಾಂಶ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿದೆ ಎಂದಿದ್ದಾರೆ.
ನಮ್ಮ ಈ ಪ್ರದೇಶವು ಶೈಕ್ಷಣಿಕವಾಗಿ ಹಿಂದುಳಿದ ಪ್ರೆದೇಶ ಎಂದು ಹಣೆಪಟ್ಟಿಯನ್ನು ತೆಗೆದುಹಾಕಿ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ, ಇದು ನಮಗೆ ಸಂತಸ ತಂದಿದೆ ಎಂದಿದ್ದಾರೆ.
ಶಿಕ್ಷಣ ಸಂಸ್ಥೆಯ ಆನಂದಕುಮಾರ್ (88.3%) ಹಾಗೂ ಭಾಗ್ಯಶ್ರೀ ಶಿವಾಜಿ (88.5%) ಫಲಿತಾಂಶ ಪಡೆಯುವುದರ ಮೂಲಕ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ-17, ದ್ವಿತೀಯ ಶ್ರೇಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದ್ವಿತೀಯ ಪಿಯುಸಿಯಲ್ಲಿ ಶೇ. 92ರಷ್ಟು ಹಾಗೂ ಎಸ್‌ಎಸ್‌ಎಲ್‌ಸಿಯ ಸಿ.ಬಿ.ಎಸ್.ಸಿಯಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದ್ದು ಹೆಮ್ಮೆಯ ವಿಷಯ ಎಂದಿದ್ದಾರೆ.