ಸುರಪುರ : ಸರ್ಕಾರದ ಕೋವಿಡ್ ನಿಯಮದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸರಳ ಮತ್ತು ಸಂಭ್ರಮದ ಬಕ್ರೀದ್ ಹಬ್ಬ ಆಚರಿಸಿದರು.
ಬೆಳಗ್ಗೆ 7 ಗಂಟೆ ಸುಮಾರಿಗೆ ಆಯಾ ಮಸೀದಿಗಳಲ್ಲಿ ಸೇರಿದ ಮುಸ್ಲಿಂ ಜನತೆ ಸಾಮಾಜಿಕ ಅಂತರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರತಿಯೊಂದು ಮಸೀದಿಯಲ್ಲಿಯೂ ಪ್ರಾರ್ಥನೆಗೆ ಬರುವವರಿಗೆ ಫೀವರ್ ಚೆಕ್ ಮಾಡಿ ನಂತರ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ 50ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ನಂತರ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲೂಕು ಅಧ್ಯಕ್ಷ ದಾವೂದ್ ಪಠಾಣ್ ಮಾತನಾಡಿ, ಪ್ರತಿ ವರ್ಷ ತುಂಬಾ ಅದ್ದೂರಿಯಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದರಿಂದ ತುಂಬಾ ಸರಳವಾಗಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರೂ ಮಾಸ್ಕ್ ಧರಿಸಿ ಪ್ರಾರ್ಥನೆ ಸಲ್ಲಿಸಿ ದೇಶದಿಂದ ಕೊರೊನಾ ನಿರ್ಮೂಲನೆಯಾಗಲೆಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಪ್ರಾರ್ಥನೆಯಲ್ಲಿ ಅಹ್ಮದ್ ಪಠಾಣ್ ಅಬೀದ್ ಹುಸೇನ್ ಪಗಡಿ ಆಸೀಫ್ ಯಾದಗಿರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.