ಯಾದಗಿರಿ: ಭಾರೀ ಮಳೆಯಿಂದಾಗಿ ನಗರದ ಹೊರಭಾಗದ ವಡಗೇರಾ ಕ್ರಾಸ್ನಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಮುಖ್ಯರಸ್ತೆ (ರಾಜ್ಯ ಹೆದ್ದಾರಿ ರಸ್ತೆ) ಕುಸಿದು ಹೋಗಿದ್ದು, ರಸ್ತೆ ದುರಸ್ತಿಗೆ ಮುಂದಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರಸ್ತೆ ಕುಸಿದು ಒಂದು ತಿಂಗಳು ಗತಿಸಿದರೂ ಅಧಿಕಾರಿಗಳು ಮಾತ್ರ ದುರಸ್ತಿಗೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಅದರ ಬದಲಿಗೆ ಗುರಸಣಗಿ ಗ್ರಾಮದ ರಸ್ತೆ ಮೂಲಕ ಜಿಲ್ಲಾಕೇಂದ್ರಕ್ಕೆ ತೆರಳಲು ಅವಕಾಶ ನೀಡಲಾಗಿದೆ.
ಈ ಮಾರ್ಗದಲ್ಲಿ ಉಂಟಾಗುವ ಸಂಚಾರ ದಟ್ಟಣೆಯಿಂದ ವಡಗೇರಾ, ಶಹಾಪುರ, ಸುರಪುರ ತಾಲೂಕಿನ ಪಟ್ಟಣದ ಜನರು ಹಾಗೂ ಗ್ರಾಮಸ್ಥರು ಯಾದಗಿರಿ ನಗರಕ್ಕೆ ಆಗಮಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ರಸ್ತೆ ದುರಸ್ತಿ ಪೂರ್ಣಗೊಳಿಸಿ ಎಂದು ಸವಾರರು ಒತ್ತಾಯಿಸಿದ್ದಾರೆ. ಶಾಸಕ ವೆಂಕಟರೆಡ್ಡಿ ಮುದ್ನಾಳ ಪ್ರತಿಕ್ರಿಯಿಸಿ, ಈ ಕುರಿತು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.