ಸುರಪುರ (ಯಾದಗಿರಿ) : ತಾಲೂಕಿನ ದೇವಾಪುರ ಕ್ರಾಸ್ ಮೂಲಕ ಆರಂಭಗೊಂಡು ವಿಜಯಪುರಕ್ಕೆ ತಲುಪುವ ದೇವಾಪುರ ಮನಗೂಳಿ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆ ಕೆಸರು ಗದ್ದೆಯಂತಾಗಿತ್ತು. ಇದರಿಂದಾಗಿ ಅಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿ ರಸ್ತೆ ಮೇಲೆ ಓಡಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಈ ಘಟನೆ ಸಂಬಂಧ ಈಟಿವಿ ಭಾರತ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಶಾಸಕ ನರಸಿಂಹ ನಾಯಕ (ರಾಜುಗೌಡ) ರಸ್ತೆ ದುರಸ್ಥಿಗೊಳಿಸಿಕೊಂಡುವಂತೆ ಸೂಚಿಸಿದ್ದಾರೆ. ಈ ರಸ್ತೆ ಕಾಮಗಾರಿಗಾಗಿ ಈಗಾಗಲೇ ತಮ್ಮ ಜಮೀನು ನೀಡಿರುವ ರೈತರು ಪರಿಹಾರ ಧನ ಬಂದಿಲ್ಲವೆಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಮಳೆಗಾಲವಾಗಿದ್ದರಿಂದ ರಸ್ತೆಯಲ್ಲಿ ಆಳೆತ್ತರದ ಗುಂಡಿಗಳು ಬಿದ್ದು ನೀರು ತುಂಬಿ ನಿತ್ಯವೂ ವಾಹನ ಸವಾರರು ಪರದಾಡುವ ಜೊತೆಗೆ ಅನೇಕರು ಅಪಘಾತಕ್ಕೀಡಾಗಿದ್ದರು.
ಇದನ್ನೂ ಓದಿ: ಅರ್ಧಕ್ಕೆ ನಿಂತ ದೇವಾಪುರ-ಮನಗೂಳಿ ಹೆದ್ದಾರಿ ಕಾಮಗಾರಿ.. ಕೆಸರು ಗದ್ದೆಯಂತಾದ ರಸ್ತೆ
ಇದನ್ನು ಅರಿತು ಶಾಸಕ ರಾಜುಗೌಡ ನ್ಯಾಯಾಲಯದಲ್ಲಿನ ವ್ಯಾಜ್ಯ ಮುಗಿಯುವವರೆಗೆ ರಸ್ತೆ ದುರಸ್ಥಿ ಮಾಡಿಕೊಡುವಂತೆ ತಿಳಿಸುವ ಜೊತೆಗೆ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಪೊಲೀಸರ ಸಮ್ಮುಖದಲ್ಲಿ ಕಾಮಗಾರಿ ಆರಂಭಗೊಂಡಿದೆ. ರಸ್ತೆಯಲ್ಲಿ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ಈಟಿವಿ ಭಾರತದ ವರದಿಯಿಂದ ಕಾಮಗಾರಿ ಆರಂಭಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಸ್ಥಳೀಯ ಉಪನ್ಯಾಸಕ ಮಲ್ಲಿಕಾರ್ಜುನ ಬಾದ್ಯಾಪುರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.