ಯಾದಗಿರಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ವಿಜಯಪುರದ ಆಲಮಟ್ಟಿ ಡ್ಯಾಂನಿಂದ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಇದರಿಂದಾಗಿ ಬಸವಸಾಗರ ಜಲಾಶಯದಿಂದ 2 ಲಕ್ಷದ 20 ಸಾವಿರದ 620 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದ್ದು, ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.
ಸದ್ಯಕ್ಕೆ ಬಸವಸಾಗರ ಜಲಾಶಯದ ನೀರಿನ ಒಳಹರಿವು 2 ಲಕ್ಷದ 20 ಸಾವಿರ ಕ್ಯೂಸೆಕ್ ಇದ್ದು, 492.25 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿದೆ. 33.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಜಲಾಶಯದಲ್ಲೀಗ 27 ಟಿಎಂಸಿ ನೀರು ಸಂಗ್ರವಾಗಿದೆ.
ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ಜಿಲ್ಲಾಡಳಿತ ಪ್ರವಾಹ ಭೀತಿ ಎದುರಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ನದಿ ಪಾತ್ರದ ಜನರು ಎಚ್ಚರದಿಂದಿರಲು ಸೂಚಿಸಿದೆ.