ಯಾದಗಿರಿ: ಕಾಲುವೆ ನವೀಕರಣಕ್ಕೆ ಒತ್ತಾಯಿಸಿ ಶೋಷಿತರ ಪರ ಹೋರಾಟ ಸಮಿತಿ ಕಾರ್ಯಕರ್ತರು ರಸ್ತೆ ತಡೆದು ಸುರಪುರದಲ್ಲಿ ಪ್ರತಿಭಟನೆ ನಡೆಸಿದ್ರು.
ನಗರದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಕೃಷ್ಣ ಭಾಗ್ಯ ಜಲ ನಿಗಮ ವ್ಯಾಪ್ತಿಯ ಎಡದಂಡೆ ಕಾಲುವೆ ನವೀಕರಣಕ್ಕೆ ಒತ್ತಾಯಿಸಿದರು.
ಶಹಾಪುರದ ಭೀಮರಾಯನಗುಡಿ ವ್ಯಾಪ್ತಿ ಓಎಂ ಡಿವಿಜನ್ ಉಪಕಾಲುವೆ ನಂ.6,8 ಡಿಸ್ಟ್ರಬ್ಯೂಟರ್‌ನ ಕಾಲುವೆಗಳು ಅಲ್ಲಲ್ಲಿ ಒಡೆದು ಹಾಳಾಗಿ ಕಾಲುವೆ ನೀರು ವ್ಯರ್ಥವಾಗ್ತಿದೆ. ಈಗಾಗಲೇ ಕೇಂದ್ರ ಸರ್ಕಾರ 2019-20ರಲ್ಲಿ ಕ್ಯಾನಲ್ ರಿಪೇರಿಗೆ ಹಣ ಬಿಡುಗಡೆ ಮಾಡಿದೆ. ಸರ್ಕಾರ ಈಗಾಗಲೇ ಟೆಂಡರ್ ಕರೆಯಲು ಮುಂದಾಗಿದೆ. ಕೆಬಿಜೆಎನ್ ಎಲ್ ವ್ಯಾಪ್ತಿಯ ಕ್ಲೂಜರ್ ಪ್ರಕಾರ ಕಾಲುವೆ ರಿಪೇರಿ ಮಾಡ್ಬೇಕು. ಅಧಿಕಾರಿಗಳು ರಿಪೇರಿಗೆ ಬಂದ ಹಣವನ್ನು ಪ್ರಭಾವಿಗಳ ಒತ್ತಡದಿಂದ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿದ್ರು.
ಕಾಲುವೆಯ ಕೊನೆ ಭಾಗದವರೆಗೂ ನೀರು ತಲುಪಿಸುವಂತೆ ಕಾಲುವೆಯ ರಿಪೇರಿ ಕಾಮಗಾರಿ ಮಾಡುವಂತೆ ಪ್ರತಿಭಟನಾನಿರತ ಕಾರ್ಯಕರ್ತರು ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.