ಸುರಪುರ : ನಗರದ ವಾರ್ಡ್ ನಂಬರ್ 19ರ ಹಸನಾಪುರದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಿಯಮಾನುಸಾರ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಪ್ರದೇಶದಲ್ಲಿ ಕಾಮಗಾರಿ ಮಾಡದೆ ಬೇರೆಡೆ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಪುತ್ರ ಜವಳಿ ಮಾತನಾಡಿ, 2017-18 ಹಾಗೂ 2018-19 ನೇ ಸಾಲಿನ ನಗರೋತ್ಥಾನ ಯೋಜನೆಯಡಿ ವಾರ್ಡ್ ನಂಬರ್-19ರ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಮಾಡಬೇಕಾಗಿದೆ. ಸಿಸಿ ರಸ್ತೆ ಕಾಮಗಾರಿಗೆ ಅನುದಾನ ದುರುಪಯೋಗ ಪಡಿಸಲಾಗಿದೆ.
ಸರ್ಕಾರದ ನಿಯಮದಂತೆ ದಲಿತ ಕಾಲೋನಿಗಳಲ್ಲಿ 24 ಪರ್ಸೆಂಟ್ ಅನುದಾನ ಬಳಸಿ ಕಾಮಗಾರಿ ಮಾಡುವಂತೆ ನಿಯಮವಿದ್ದರೂ ನಿಯಮವನ್ನು ಗಾಳಿಗೆ ತೂರಿರುವ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಕಿರಿಯ ಅಭಿಯಂತರ ಹಾಗೂ ನಗರಾಭಿವೃದ್ಧಿ ಯೋಜನಾ ನಿರ್ದೇಶಕರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೂಫಿಯಾ ಸುಲ್ತಾನ್ ಅವರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ತಾಲೂಕು ಸಂಚಾಲಕ ವೀಭದ್ರಪ್ಪ ತಳವಾರಗೇರಾ, ರಮೇಶ ಬಡಿಗೇರ, ದೊಡ್ಮನಿ ಶಿವರಾಜ್ ಕಲಕೇರಿ ಯಲ್ಲಪ್ಪ ಗುಂಡಲಗೇರಾ ಇದ್ದರು.