ಯಾದಗಿರಿ: ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಯನ್ನ ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ರೈತ ಹಾಗೂ ಜನ ವಿರೋಧಿ ಕಾಯ್ದೆಯಾಗಿದ್ದು, ಕೂಡಲೇ ಸರ್ಕಾರ ಇದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಕಾಯ್ದೆಯಿಂದ ಫಲವತ್ತಾದ ಜಮೀನನ್ನ ಉದ್ಯಮಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಖರೀದಿಸಲು ಮುಕ್ತ ಅವಕಾಶ ಮಾಡಿಕೊಟ್ಟಂತಿದೆ. ಸರ್ಕಾರ ಜಾರಿಗೆ ತಂದ ಕಾಯ್ದೆಯಿಂದ ಎಲ್ಲ ಜಮೀನು ಉಳ್ಳವರ ಪಾಲಾಗುವ ಮೂಲಕ ರೈತರು ಬೀದಿಗೆ ಬರುವಂತಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿತು.
ಒಂದು ವೇಳೆ, ಸರ್ಕಾರ ಈ ಕಾಯ್ದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.