ಯಾದಗಿರಿ: ಶನಿವಾರ ರಾತ್ರಿ ಸುರಿದ ಮಳೆ ಅರ್ಭಟಕ್ಕೆ ಹಳ್ಳದ ನೀರಿನ ಪ್ರವಾಹಕ್ಕೆ ಸಿಲುಕಿದ ಕುಟುಂಬವನ್ನು ಜೆಸ್ಕಾಂ ನೌಕರರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ಜಿಲ್ಲೆಯ ಶಹಾಪುರ ನಗರದ ಬಾಪುಗೌಡ ಬಡವಾಣೆ ಬಳಿ ನಡೆದಿದೆ.
ಶೆಡ್ ಹಾಕಿಕೊಂಡು ಕುಟುಂಬವೊಂದು ವಾಸಿಸುತ್ತಿತ್ತು. ರಾತ್ರಿಯಿಂದ ಬಿಟ್ಟುಬಿಡದೆ ಸುರಿದ ಮಳೆಯಿಂದ ಹಳ್ಳದ ನೀರಿನ ಪ್ರವಾಹಕ್ಕೆ ಶೆಡ್ ಸಂಪೂರ್ಣ ಮುಳುಗುವ ಹಂತ ತಲುಪಿತ್ತು. ಜೆಸ್ಕಾಂ ನೌಕರ ಇಕ್ಬಾಲ್ ಹಾಗೂ ಸಿಬ್ಬಂದಿಯು ಅಗ್ನಿ ಶಾಮಕ ದಳದ ನೆರವಿನೊಂದಿಗೆ ಅರ್ಜುನ್ ಗೂಡೂರ ಹಾಗೂ ಅವರ ಪತ್ನಿ, ಮಕ್ಕಳನ್ನು ರಕ್ಷಿಸಲಾಗಿದೆ.
ಜೆಸ್ಕಾಂ ಸಿಬ್ಬಂದಿ ಇಕ್ಬಾಲ್ ಲೋಹಾರಿ ನಿರಾಶ್ರಿತ ಕುಟುಂಬಕ್ಕೆ ಉಪಹಾರ ನೀಡಿ, ಸ್ವತಃ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.