ಯಾದಗಿರಿ: ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್-19 ತಡೆಗಟ್ಟಲು ಯಾದಗಿರಿ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತಾ ಕ್ರಮಗಳು ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಬೀದರ್ ವೈದ್ಯಕೀಯ ಮಹಾವಿದ್ಯಾಲಯದಿಂದ ಆಗಮಿಸಿದ ರಾಜ್ಯ ಮಟ್ಟದ ಮೌಲ್ಯಮಾಪನ ತಂಡ ಪ್ರಶಂಸಿಸಿದೆ.
ಜೂನ್ 26ರಿಂದ 28ರವರೆಗೆ ಜಿಲ್ಲೆಯಲ್ಲಿ ಮೂರು ದಿನಗಳವರೆಗೆ ಎಲ್ಲಾ ತಾಲೂಕುಗಳಿಗೆ ಡಾ. ಚಂದ್ರಕಾಂತ ಚಿಲ್ಲರಗಿ, ಡಾ. ಶಿವರಾಜ ಬಿರಾದಾರ ಮತ್ತು ಡಾ. ಅಶೋಕ ಅವರ ತಂಡ ಭೇಟಿ ನೀಡಿತು. ಕೋವಿಡ್-19 ತಡೆಗಟ್ಟುವಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ಕಾರ್ಯಗಳನ್ನು ಪರಿಶೀಲಿಸಿತು. ಕ್ವಾರೆಂಟೈನ್ ಸೆಂಟರ್, ನಿರ್ಬಂಧಿ ಪ್ರದೇಶ, ಫೀವರ್ ಕ್ಲಿನಿಕ್, ಗಂಟಲು ದ್ರವ ಸಂಗ್ರಹಿಸುವ ವಾಹನ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ, ಕೋವಿಡ್ ಲ್ಯಾಬ್, ಪಾಸಿಟಿವ್ ಹಾಗೂ ನೆಗೆಟಿವ್ ಪ್ರಕರಣ, ಆಶಾ ಕಾರ್ಯಕತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿತು.
ಕೋವಿಡ್-19 ತಡೆಗಟ್ಟುವಲ್ಲಿ ಯಾದಗಿರಿ ಜಿಲ್ಲಾಡಳಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸುವ ಮಾರ್ಗಸೂಚಿಯಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆ ನಡುವೆಯೂ ಸಾವು-ನೋವು ಸಂಭವಿಸಿದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪಾಸಿಟಿವ್ ಪ್ರಕರಣಗಳನ್ನು ಶೀಘ್ರ ಪತ್ತೆಹಚ್ಚುವಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಅತೀಹೆಚ್ಚು ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಿದೆ. ಜಿಲ್ಲೆಯಲ್ಲಿ ವರದಿಯಾಗಿರುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ಬೇಗನೆ ಗುಣಮುಖರಾಗಿ ಬಿಡುಗಡೆ ಮಾಡಿರುವುದು ಜಿಲ್ಲಾಡಳಿತ ಕೈಗೊಂಡ ಅತ್ಯುತ್ತಮ ಕ್ರಮಗಳಿಗೆ ಹಿಡಿದ ಕನ್ನಡಿ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕುರ್ಮಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೇರಿದಂತೆ ಇತರರು ಹಾಜರಿದ್ದರು.