ಯಾದಗಿರಿ: ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆತ್ಮೀಯತೆಯಿಂದ ಆಲಿಸಿ, ಅವುಗಳನ್ನು ಶೀಘ್ರ ಪರಿಹರಿಸಬೇಕು ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಉಮೇಶ ಬಿ.ಚಿಕ್ಕಮಠ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು-ಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ನಿತ್ಯ ಪತ್ರಿಕೆಗಳು ಕೂಡ ಸಾರ್ವಜನಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅವುಗಳನ್ನು ಅನುಸರಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ. ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.
ಇತ್ತೀಚಿಗೆ ಪರವಾನಗಿ ಪಡೆಯದೇ ಮೆಡಿಕಲ್ ಕೇಂದ್ರಗಳನ್ನು ತೆರೆದಿರುವುದು ಕಂಡುಬರುತ್ತಿದೆ. ಈ ಮೂಲಕ ಸಾರ್ವಜನಿಕರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಜೀವ ಹಾನಿ ಕೂಡ ಸಂಭವಿಸಬಹುದು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.