ಯಾದಗಿರಿ : ಕಳೆದ ಕೆಲ ದಿನಗಳಿಂದ ರಾಜ್ಯದ ಹೆಸರನ್ನು ಕೆಡಿಸಿದ್ದ ಮಾದಕ ವಸ್ತು ಮಾರಾಟ ಜಾಲ ಮತ್ತು ಸೇವನೆಯ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡು ಅದನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಯ್ತು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣ ಭೂಪಾಲರೆಡ್ಡಿ ನಾಯ್ಕಲ್, ದೇಶದ ಶಕ್ತಿಯಾಗಿರುವ ಯುವ ಜನತೆ ಡ್ರಗ್ಸ್ ಗೆ ಮಾರು ಹೋಗಿ ತಮ್ಮ ಬದುಕು ನಾಶ ಮಾಡಿಕೊಳ್ಳುತ್ತಿದೆ. ಈ ವಿಷಯದಲ್ಲಿ ಯಾರೇ ತಪ್ಪು ಮಾಡಿದ್ರೂ ಸರ್ಕಾರ ಅವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದರು.
ಇದೇ ವೇಳೆ ಬಿಜೆಪಿ ಯುವ ಮೋರ್ಚ ಜಿಲ್ಲಾಧಕ್ಷ ಮೌನೇಶ್ ಬೆಳಿಗೇರ ಮಾತನಾಡಿ, ಡ್ರಗ್ಸ್ ಹಾವಳಿಯಿಂದ ಸಮಾಜದ ಸ್ವಾಸ್ಥ ಸಂಪೂರ್ಣ ಹಾಳಾಗುತ್ತಿದೆ. ಅದಕ್ಕೆ ಸರ್ಕಾರ ಕಡಿವಾಣ ಹಾಕುವ ಮೂಲಕ ಹೊಸ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು.