ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ನ ರಣಕೇಕೆ ಮುಂದುವರೆದಿದ್ದು, ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಮೂಲಕ ಜಿಲ್ಲಾದ್ಯಂತ 78ಕ್ಕೂ ಅಧಿಕ ನಿರ್ಭಂದಿತ ಪ್ರದೇಶಗಳನ್ನ ಘೋಷಣೆ ಮಾಡಿದೆ. ಆದ್ರೆ ನಿರ್ಭಂದಿತ ಪ್ರದೇಶಗಳಲ್ಲಿನ ಜನರಿಗೆ ನೀಡಬೇಕಾದಂತಹ ಮೂಲ ಸೌಕರ್ಯಗಳನ್ನ ಜಿಲ್ಲಾಡಳಿತ ಒದಗಿಸದ ಹಿನ್ನೆಲೆ ಇಲ್ಲಿಯ ಜನ ತಮ್ಮ ಅಗತ್ಯಕ್ಕಾಗಿ ನಗರಾದ್ಯಂತ ತಿರಗಾಡುವ ಮೂಲಕ ಕೊರೊನಾ ಭೀತಿ ಹೆಚ್ಚಿಸುತ್ತಿದ್ದಾರೆ.
ಸರ್ಕಾರದ ಆದೇಶ ಪಾಲಿಸಬೇಕಾದ ಜಿಲ್ಲಾಡಳಿತವೇ ಕಠಿಣ ಕ್ರಮಕ್ಕೆ ಮುಂದಾಗದೆ ಬೇಜವಾಬ್ದಾರಿ ಮೆರೆಯುತ್ತಿದೆ ಅನ್ನೋ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
ಅದಲ್ಲದೆ ಈ ನಿರ್ಭಂದಿತ ಪ್ರದೇಶಗಳಲ್ಲಿ ನಿಗಾವಹಿಸಲು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡದ ಹಿನ್ನೆಲೆ ಸಾರ್ವಜನಿಕರು ಇಲ್ಲಿ ಅಡ್ಡಾದಿಡ್ಡಿ ತಿರುಗಾಡುತ್ತಿದ್ದಾರೆ. ಇನ್ನೂ ಜಿಲ್ಲಾಡಳಿತ ಮಾತ್ರ ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ಭಾವ ಮೆರೆಯುತ್ತಿದೆ ಅನ್ನೋ ಆರೋಪಗಳು ಕೇಳಿ ಬರುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ಇಲ್ಲಿಯವರೆಗೆ 949 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 838 ಜನ ಕೊರೊನಾ ವೈರಸ್ ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 110 ಪ್ರಕರಣಗಳು ಸಕ್ರಿಯವಾಗಿದ್ದು, ಒಬ್ಬ ವೃದ್ಧೆ ಮೃತಪಟ್ಟಿದ್ದಾರೆ.
ಪ್ರತಿನಿತ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಬೇಸತ್ತಿರುವ ಜಿಲ್ಲಾಡಳಿತ, ಜುಲೈ 31 ರವರೆಗೆ ಜಿಲ್ಲಾದ್ಯಾಂತ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಆದ್ರೆ ಸರ್ಕಾರದ ಆದೇಶವನ್ನ ಗಾಳಿಗೆ ತೂರುವ ಮೂಲಕ ಜಿಲ್ಲೆಯ ಜನ ಮಾಸ್ಕ್ ಧರಿಸದೆ ಸಾರ್ವಜನಿಕ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದಾರೆ. ಅಷ್ಟೇಅಲ್ಲದೇ, ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳದೆ ಕೊರೊನಾ ಭೀತಿ ಹೆಚ್ಚಿಸುತ್ತಿದ್ದಾರೆ.