ಸುರಪುರ (ಯಾದಗಿರಿ): ನಗರದ ಆಸರ ಮೊಹಲ್ಲಾದ ಕುಟುಂಬವೊಂದರ ದಂಪತಿಯಲ್ಲಿ ಕೊರೊನಾ ಸೋಂಕು ಕಂಡುಬಂದು, ಇನ್ನೂ ಇಬ್ಬರನ್ನು ಕ್ವಾರಂಟೈನ್‌ಗೊಳಿಸಲಾಗಿದೆ. ಅಲ್ಲದೆ ಆಸರ ಮೊಹಲ್ಲಾದಿಂದ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಿದ್ದಲ್ಲದೆ ಬಹುತೇಕ ನಗರವೇ ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ.
ಆದರೆ ಜನರು ಮಾತ್ರ ಕೊರೊನಾ ಸೋಂಕಿನ ಬಗ್ಗೆ ಅರಿವಿಲ್ಲದೆ ಓಡಾಡುತ್ತಿದ್ದಾರೆ. ಈಗಾಗಲೆ ಜಿಲ್ಲಾಧಿಕಾರಿಗಳು ಲಾಕ್‌ಡೌನ್ ನಿಯಮದಂತೆ ಕೇವಲ ದಿನಸಿ ಅಂಗಡಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರ ತೆಗೆಯಲು ಅವಕಾಶ ನೀಡಿದ್ದಾರೆ. ನಗರದೆಲ್ಲೆಡೆ ಕಿರಾಣಿ ಅಂಗಡಿ ಮತ್ತು ಹಾಲು, ತರಕಾರಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಇಷ್ಟೆಲ್ಲ ವ್ಯವಸ್ಥೆ ಕಲ್ಪಿಸಿದ್ದರು ಜನರು ಮಾತ್ರ ದರ್ಬಾರ್ ರಸ್ತೆ, ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ವೃತ್ತದ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಕೂಡಲೆ ಜನರ ಓಡಾಟಕ್ಕೆ ಕಡಿವಾಣ ಹಾಕಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸುತ್ತಿದ್ದಾರೆ.