ಯಾದಗಿರಿ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಸಂಚಾರಿ ಪೊಲೀಸ್ ಠಾಣೆಯಿಂದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ನಿಮಿತ್ತ ವಿವಿಧ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ನಗರದ ತಹಶೀಲ್ದಾರ್ ಕಚೇರಿಯಿಂದ ಪ್ರಮುಖ ರಸ್ತೆಗಳಲ್ಲಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಂದ ಜನ ಜಾಗೃತಿ ಜಾಥಾ ನಡೆಯಿತು. ಈ ಜಾಥಾಕ್ಕೆ ಸಾರಿಗೆ ಇಲಾಖೆ ಕಲಬುರಗಿ ವಿಭಾಗ ಜಂಟಿ ಕಾರ್ಯದರ್ಶಿ ಆಯುಕ್ತೆ ಎಂಪಿ ಓಂಕಾರೇಶ್ವರಿ ಚಾಲನೆ ನೀಡಿದರು. ಇನ್ನೂ ನಗರದ ಹೊಸ ಬಸ್ ನಿಲ್ದಾಣದ ಕಾರ್ಯಕ್ರಮದಲ್ಲಿ ರಸ್ತೆ ಸಂಚಾರ ಮಾಡುವಾಗ ವಾಹನ ಸವಾರರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಎಸ್ ಪಿ ಋಷಿಕೇಶ್ ಭಗವಾನ್ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಳಿಕ ಜಿಲ್ಲೆಯ RTO ವಸಂತ್ ಚೌಹಾಣ್ ನೇತೃತ್ವದಲ್ಲಿ, ಸರ್ಕಾರಿ ಬಸ್ಗಳಿಗೆ ರಸ್ತೆ ಸುರಕ್ಷಿತ ನಿಯಮಗಳನ್ನು ಹೊಂದಿರುವ ಭಿತ್ತಿ ಪತ್ರಗಳನ್ನು ಅಂಟಿಸಲಾಯಿತು. ಇನ್ನು ನಗರದ ಆಟೋ ಚಾಲಕರಿಗೆ, ವಾಹನ ಸವಾರಿಗೆ, ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ, ವಾಹನ ಮತ್ತು ಚಾಲನ ಪರವಾನಗಿ ಪತ್ರ ಪಡೆಯುವಂತೆ ಮನವರಿಕೆ ಮಾಡಲಾಯಿತು.