ಸುರಪುರ: ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಗೆ ಹತ್ತಾರು ಎಕರೆ ಪಪ್ಪಾಯಿ ಬೆಳೆಗೆ ಹಾನಿಯಾಗಿದೆ. ಸಿಡಿಲು ಬಡಿದು ಜಾನುವಾರು ಸಾವನ್ನಪ್ಪಿದ್ದು, ರೈತ ಕಂಗಾಲಾಗಿದ್ದಾನೆ.
ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಗೆ ತಾಲೂಕಿನ ಹೆಮ್ಮಡಗಿ, ಚಂದ್ಲಾಪುರ, ದೇವತ್ಕಲ್, ಹಾಲಬಾವಿ ಸೇರಿ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ಪಪ್ಪಾಯಿ ಗಿಡಗಳು ಗಾಳಿಯಿಂದ ನೆಲಕಚ್ಚಿವೆ. ಚಂದ್ಲಾಪುರ ಗ್ರಾಮದ ಬಳಿಯ ಹಸನಾಪುರ ಗ್ರಾಮದ ಜಗದೀಶ್ ನಂಬಾ ಎಂಬುವರ ಹೊಲದಲ್ಲಿ ಪಪ್ಪಾಯಿ ಗಿಡಗಳು ನೆಲಕ್ಕುರಳಿರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಫಸಲು ಮಣ್ಣು ಪಾಲಾಗಿದೆ.
ಸಾಲ ಮಾಡಿ ಪಪ್ಪಾಯಿ ಬೆಳೆದಿದ್ದು, ಈಗ ಅಕಾಲಿಕ ಮಳೆಯಿಂದ ನಷ್ಟವಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ರೈತರು ಮನವಿ ಮಾಡಿದ್ದಾರೆ.
ಸಿಡಿಲು ಬಡಿದು ಎತ್ತು ಸಾವು :
ತಾಲೂಕಿನ ಹಸನಾಪುರ ಗ್ರಾಮದ ರೈತ ಹನಮಂತ್ರಾಯ ಗೌಡ ಎಂಬುವರು ತಮ್ಮ ಜಮೀನಿನಲ್ಲಿ ಜಾನುವಾರರುಗಳನ್ನು ಕಟ್ಟಿದ್ದರು. ಈ ವೇಳೆ ಸಿಡಿಲು ಬಿಡಿದು ಒಂದು ಎತ್ತು ಸಾವನ್ನಪ್ಪಿದ್ದು, ಎರಡು ಎತ್ತುಗಳು ಗಾಯಗೊಂಡಿವೆ.