ಸುರಪುರ: ಮ್ಯಾನ್ಹೋಲ್ಗಳಲ್ಲಿ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷಿತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಸುರಪುರ ನಗರಸಭೆ ಅಧಿಕಾರಿಗಳ ವಿರುದ್ಧ ಕೆಲವು ಸಂಘಸಂಸ್ಥೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಕೈಯಿಂದಲೇ ಚರಂಡಿಯಲ್ಲಿನ ಕಸವನ್ನು ತೆಗೆಯಿಸಿ ಟ್ರ್ಯಾಕ್ಟರ್ಗಳಿಗೆ ತುಂಬುವುದು ಹಾಗೂ ದಿನಬೆಳಗಾದರೆ ಮಹಿಳಾ ಪೌರಕಾರ್ಮಿಕರು ಯಾವುದೇ ಒಂದು ಸುರಕ್ಷತಾ ಕ್ರಮಗಳಿಲ್ಲದೇ ಕಸ ಗುಡಿಸುವಂತದ್ದು ಸಾಮಾನ್ಯ ಸಂಗತಿಯಾಗಿದೆ. ಪೌರಕಾರ್ಮಿಕರ ಬಗೆಗಿನ ಈ ನಿರ್ಲಕ್ಷ್ಯವನ್ನು ಕಂಡು ಬೇಸತ್ತ ನಗರದ ಪ್ರಜ್ಞಾವಂತರು ಕೂಡಲೇ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಇಲ್ಲಿಯವರೆಗೆ ಪೌರಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಕೂಡ ಜನರು ಆಗ್ರಹಿಸುತ್ತಿದ್ದಾರೆ.
ಓದಿ: ನಿಷೇಧವಿದ್ದರೂ ಗುರುಗುಂಟಾ ಅಮರೇಶ್ವರ ಕಾರ್ತಿಕೋತ್ಸವದಲ್ಲಿ ಭಕ್ತರು ಭಾಗಿ!
ಈ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ಮಾತನಾಡಿ, ಪೌರ ಕಾರ್ಮಿಕರ ಬಗ್ಗೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರು ಇವರ ವಿರುದ್ಧ ಕ್ರಮ ಕೈಗೊಂಡು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಹಾಗೂ ಎಲ್ಲಾ ಪೌರಕಾರ್ಮಿಕರಿಗೆ ಸುರಕ್ಷಿತಾ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಪೌರಕಾರ್ಮಿಕರಿಗೆ ಬಾಕಿ ಉಳಿದಿರುವ ಸಂಬಳವನ್ನು ಕೂಡ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.