ಯಾದಗಿರಿ: ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜಿಲ್ಲೆಯ ವಲಸೆ ಕಾರ್ಮಿಕರಿಗಾಗಿ ಕ್ವಾರೆಂಟೈನ್ ಕೇಂದ್ರ ತೆರೆಯಲು ತೆರಳಿದ ಅಧಿಕಾರಿಗಳಿಗೆ, ತಮ್ಮ ಗ್ರಾಮದಲ್ಲಿ ಕ್ವಾರೆಂಟೆನ್ ಕೇಂದ್ರ ಮಾಡದಂತೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಮುಂಬೈನಿಂದ ನಾಳೆ ಶ್ರಮಿಕ ರೈಲಿನ ಮೂಲಕ ಜಿಲ್ಲೆಯ ವಲಸೆ ಕಾರ್ಮಿಕರು ಆಗಮಿಸುತ್ತಿದ್ದು, ಇವರಿಗೆ ಗ್ರಾಮದಲ್ಲಿ ಕ್ವಾರೆಂಟೈನ್ ಮಾಡದಂತೆ ಜಿಲ್ಲೆಯ ವಡಗೇರಾ ತಾಲೂಕಿನ ಗುರಸಣಗಿ ಗ್ರಾಮಸ್ಥರು ವಿರೋಧಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ವಾರೆಂಟೈನ್ ಕೇಂದ್ರ ಸ್ಥಾಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಗ್ರಾಮ ಲೆಕ್ಕಿಗ ದೇವರಾಜ ಸೇರಿದಂತೆ ಗ್ರಾಮಚೌಕ್ ಕತಲ್ ಸಾಬ್ ಗುರಸಣಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರೆಂಟೈನ್ ಕೇಂದ್ರ ಸ್ಥಾಪಿಸಲು ಸ್ಥಳ ವೀಕ್ಷಣೆ ಮಾಡಲು ತೆರಳಿದಾಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಗ್ರಾಮದ ಮಧ್ಯ ಭಾಗದಲ್ಲಿ ಸರ್ಕಾರಿ ಶಾಲೆ ಇರುವುದರಿಂದ ಗ್ರಾಮಸ್ಥರ ಸುರಕ್ಷಿತ ದೃಷ್ಟಿಯಿಂದ ವಲಸೆ ಕಾರ್ಮಿಕರಿಗೆ ಇಲ್ಲಿ ಕ್ವಾರೆಂಟೈನ್ ಮಾಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರ ವಿರೋಧದ ಬಳಿಕ ಅಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದರು.