ಗುರುಮಠಕಲ್: ತಾಲೂಕಿನ ಗುಡುಗುಂಟಾ ಗ್ರಾಮದಲ್ಲಿ ಸುರಿದ ಮಹಾಮಳೆಗೆ ರಸ್ತೆ ಕೊಚ್ಚಿ ಹೋಗಿ ವಾರ ಕಳೆದಿದೆ. ಆದರೆ, ಅಧಿಕಾರಿಗಳು ಮಾತ್ರ ದುರಸ್ತಿ ಮಾಡದೇ ನಿರ್ಲಕ್ಷ ವಹಿಸುತ್ತಿದ್ದು, ಜನಾಕ್ರೋಶ ವ್ಯಕ್ತವಾಗುತ್ತಿದೆ.
ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿರುವ ಗಡಿಗ್ರಾಮದ ಜನರು ದಿನಬೆಳಗಾದರೆ ಕುಂಟೆ, ನೇಗಿಲು, ಎತ್ತಿನ ಬಂಡಿ ಕಟ್ಟಿಕೊಂಡು ಹೊಲ-ಗದ್ದೆಗಳಿಗೆ ತೆರಳಲು ಪ್ರತಿನಿತ್ಯ ಪರದಾಟ ನಡೆಸುತ್ತಿದ್ದಾರೆ.
ಮಳೆನೀರಲ್ಲಿ ರಸ್ತೆ ದಾಟಲು ಹೋಗುವ ಸಂದರ್ಭದಲ್ಲಿ ಅನೇಕರು ಜಾರಿ ಬಿದ್ದು ಕೈಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕಾದ ಅಧಿಕಾರಿಗಳು ಮಾತ್ರ ರಸ್ತೆಗಳ ದುರಸ್ತಿಗೆ ಮುಂದಾಗುತ್ತಿಲ್ಲ. ಈ ಕುರಿತಾಗಿ ಕೇಳಿದರೆ, ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದಷ್ಟೇ ಹೇಳುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದಷ್ಟೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಸೈದಾಪುರ-ಮಾಧ್ವಾರ ಮುಖ್ಯರಸ್ತೆಯಿಂದ ಗುಡ್ಡಗುಂಟಾ ಗ್ರಾಮದ ಮಾರ್ಗವಾಗಿ ಬಾಲಚೇಡ್ ಕ್ರಾಸ್‌ವರೆಗೂ ರಸ್ತೆ ನಿರ್ಮಾಣ ಮಾಡಲಾಗಿದೆ.
ಇದೀಗ ರಸ್ತೆ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದರೆ ಗುತ್ತಿಗೆದಾರರು ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಳಪೆ ಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆಯೇ? ಎಂಬ ಅನುಮಾನವನ್ನು ಇಲ್ಲಿನ ಜನರು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ಲ್ಯಾಂಪ್ಸ್ ಜಾಗ ಟ್ರಸ್ಟ್ಗೆ ನೋಂದಣಿ: ಅರ್ಧ ಗಂಟೆ ಚರ್ಚೆಗೆ ರೂಲಿಂಗ್ ನೀಡಿದ ಸಭಾಪತಿ ಹೊರಟ್ಟಿ