ಯಾದಗಿರಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರತೀ ವರ್ಷ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸರ್ವ ಧರ್ಮಗಳ ಜನರು ಸೇರಿ ಭಾವೈಕ್ಯತೆಯ ಸಂಕೇತವಾಗಿ ಮೊಹರಂ ಆಚರಣೆ ಮಾಡಲಾಗುತ್ತೆ. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆಚರಣೆಗೆ ಅನುಮತಿ ನೀಡಲಾಗಿದೆ. ಆದ್ರೆ ಸಂಭ್ರಮದ ನಡುವೆ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿದೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಹೊಸಹಳ್ಳಿ (ಎಸ್) ತಾಂಡದಲ್ಲಿ ನಿನ್ನೆ ತಮಟೆ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೊಸಹಳ್ಳಿ ತಾಂಡದ ನಿವಾಸಿ ಬಾಲಪ್ಪ (45) ಕೊಲೆಯಾದ ವ್ಯಕ್ತಿ. ಇದೇ ತಾಂಡದ ಶಂಕರ್ ಎಂಬಾತನ ಮನೆಯಲ್ಲಿ ನಿಶ್ಚತಾರ್ಥ ಕಾರ್ಯಕ್ರಮ ಇದ್ದ ಹಿನ್ನೆಲೆ ಬಾಲಪ್ಪ ತನ್ನ ತಮಟೆಯನ್ನ ಕೊಟ್ಟಿದ್ದರು. ಆದ್ರೆ ಶಂಕರ್ ಮಾತ್ರ ಕೆಲಸ ಮುಗಿದ ಮೇಲೆ ತಮಟೆ ವಾಪಸ್ ಕೊಡದೆ ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಆದ್ರೆ ನಿನ್ನೆ ಮೊಹರಂ ಕೊನೆ ದಿನದ ಹಿನ್ನೆಲೆ ಶಂಕರ್ ಹಾಗೂ ಕುಟುಂಬಸ್ಥರು ತಮಟೆಯನ್ನ ಹೊರ ತೆಗೆದು ಬಾರಿಸುತ್ತ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿದ್ರು. ಇದು ತಮಟೆ ಮಾಲೀಕ ಬಾಲಪ್ಪನ ಕಣ್ಣಿಗೆ ಬಿದ್ದಿದ್ದು, ತಮಟೆಯನ್ನು ವಾಪಸ್ ಕೊಡಿ ಅಂತಾ ಕೇಳಲು ಹೋಗಿದ್ದಾರೆ. ಆದ್ರೆ ಶಂಕರ್ ಮಾತ್ರ ಈ ತಮಟೆ ನಮ್ಮದು, ನಾವಿದನ್ನು ಕೊಡುವುದಿಲ್ಲ ಎಂದು ಹೇಳಿದ್ದಕ್ಕಾಗಿ ಜಗಳ ಆರಂಭವಾಗಿದೆ.
ತಮಟೆ ನಮ್ಮದು ಎಂದು ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಶಂಕರ್ ಮತ್ತು ಅವರ ನಾಲ್ಕು ಮಂದಿ ಸಹೋದರರು ಸೇರಿ ಮನ ಬಂದಂತೆ ಬಾಲಪ್ಪನಿಗೆ ಥಳಿಸಿದ್ದಾರೆ. ಬಾಲಪ್ಪನಿಗೆ ಹೊಡೆಯುವುದನ್ನು ಕಂಡ ಬಾಲಪ್ಪ ಕುಟುಂಬಸ್ಥರು ಬಾಲಪ್ಪರನ್ನು ಬಿಡಿಸಿಕೊಂಡು ಮನೆಗೆ ವಾಪಸ್ ಬರುವಷ್ಟರಲ್ಲೇ ಬಾಲಪ್ಪ ಪ್ರಾಣ ಬಿಟ್ಟಿದ್ದಾರೆ.
ವಿಷಯ ತಿಳಿದ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ಬಾಲಪ್ಪನ ಕುಟುಂಬಸ್ಥರು ಶಂಕರ್ ಹಾಗೂ ಈತನ ನಾಲ್ಕು ಮಂದಿ ಕುಟುಂಬಸ್ಥರ ಮೇಲೆ ದೂರು ದಾಖಲಿಸಿದ್ದಾರೆ. ಕೊಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮೂಲಕ ಬಾಲಪ್ಪನ ಕುಟುಂಬಸ್ಥರಿಗೆ ಪೊಲೀಸರು ನ್ಯಾಯ ಒದಗಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸದ್ಯ ಯಾದಗಿರಿ ಗ್ರಾಮಾಂತರ ಪೊಲೀಸರು ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬಿಸಿದ್ದಾರೆ.