ಸುರಪುರ(ಯಾದಗಿರಿ): ನಗರದ ದೀವಳಗುಡ್ಡ ನಿವಾಸಿ ಶಿವರಾಜ್ ತಂದೆ ನಿಂಗಪ್ಪ (24) ಎನ್ನುವ ಯುವಕನ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ಸಾರಿಗೆ ಬಸ್ ಡಿಪೋ ಎದುರಿರುವಂತಹ ಜಾಗದಲ್ಲಿ ಬೆಳಗ್ಗೆ 9 ಗಂಟೆಯ ವೇಳೆಗೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.
ಕೊಲೆಯಾದ ಯುವಕ ಶಿವರಾಜ್ನ ಚಿಕ್ಕಪ್ಪ ತಾತಪ್ಪ ಮತ್ತು ಆತನ ಇಬ್ಬರು ಮಕ್ಕಳು ಶಿವರಾಜನ ತಂದೆಯ ಆಸ್ತಿಯನ್ನು ಕಬಳಿಸುವ ಕಾರಣದಿಂದ ಈ ಹಿಂದಿನಿಂದಲೂ ಗಲಾಟೆ ನಡೆಯುತ್ತಿತ್ತು ಎನ್ನಲಾಗ್ತಿದೆ. ಇಂದು ಬೆಳಗ್ಗೆ ತಮ್ಮ ಆಸ್ತಿ ಅಳತೆ ಮಾಡಲು ಹೋದಾಗ ಯುವಕ ಶಿವರಾಜ್ ಪ್ರಶ್ನಿಸಿದ್ದಕ್ಕೆ, ಚಿಕ್ಕಪ್ಪನಾದ ತಾತಪ್ಪ ಮತ್ತು ಆತನ ಇಬ್ಬರು ಮಕ್ಕಳು ಹಲ್ಲೆ ನಡೆಸಿ ಚಾಕುವಿನಿಂದ ಕತ್ತಿನ ಭಾಗಕ್ಕೆ ಇರಿದಿದ್ದರು. ಪರಿಣಾಮ ರಕ್ತಸ್ರಾವವಾಗಿ ಶಿವರಾಜ್ ಕುಸಿದು ಬಿದ್ದಿದ್ದಾನೆ. ಶಿವರಾಜ್ ಹೊರಳಾಡುವುದನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಮೃತನ ಸಂಬಂಧಿಗಳು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ದಿಶಾ ರವಿ ಬೆಂಬಲಿಸುವ ಕಾಂಗ್ರೆಸ್ನವರಿಗೆ ನಾಚಿಕೆಯಾಗಬೇಕು: ಸಿ.ಟಿ. ರವಿ
ಸದ್ಯ ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಭೇಟಿ ನೀಡಿದ್ದಾರೆ. ಪೊಲೀಸ್ ಠಾಣೆ ಬಳಿ ಸೇರಿರುವ ಮೃತನ ತಾಯಿ ಹಾಗೂ ಆಸ್ಪತ್ರೆ ಬಳಿ ಸೇರಿರುವ ಅನೇಕ ಜನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.