ಸುರಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ರಾಜುಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರಿ ಮಳೆಗೆ ಹಾನಿಯಾದ ಪ್ರದೇಶಕ್ಕೆ ಸುರಪುರ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುರಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಮಳೆಯಿಂದ ಕಿತ್ತುಕೊಂಡು ಹೋದ ಸೇತುವೆ ನೋಡಿ ಕೂಡಲೇ ಅಧಿಕಾರಿಗಳಿಗೆ ಸೇತುವೆ ದುರಸ್ತಿ ಮಾಡಬೇಕೆಂದು ಸೂಚಿಸಿದರು.
ಅದೇ ರೀತಿ ಕವಡಿಮಟ್ಟಿಯ ನಾರಾಯಣಪುರ ಎಡದಂಡೆ ಕಾಲುವೆ ಒಡೆದಿರುವ ಕಾಲುವೆ ಪರಿಶೀಲನೆ ಮಾಡಿದರು. ಕಾಲುವೆ ಒಡೆದು ಬೆಳೆ ಹಾನಿಯಾದ ಜಮೀನು ವೀಕ್ಷಣೆ ಮಾಡಿ ಕೂಡಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಅನ್ನದಾತರಿಗೆ ಪರಿಹಾರ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಒಡೆದು ಹೋದ ಕಾಲುವೆ ದುರಸ್ತಿ ಮಾಡಲು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಶಾಸಕ ರಾಜುಗೌಡ ತಿಳಿಸಿದ್ದಾರೆ.
ಅಲ್ಲದೇ ನಗರದ ವಾರ್ಡ್ ಸಂಖ್ಯೆ 31ರ ವಣಕಿಹಾಳಕ್ಕೂ ಭೇಟಿ ನೀಡಿ ಮಳೆಯಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಭಿಕ್ಷುಕರ ಕಾಲೋನಿಯ ಜನರಿಗೆ ಸಾಂತ್ವನ ಹೇಳಿ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಅನೇಕ ಜನ ಮುಖಂಡರುಗಳಿದ್ದರು.