ಯಾದಗಿರಿ: ಕುಮಾರಣ್ಣ ರಾಜಕಾರಣಕ್ಕೂ ಮೊದಲು ನಿರ್ಮಾಪಕರಾಗಿದ್ದವರು, ಅವರಿಗೆ ಹೇಗೆ ಎಡಿಟಿಂಗ್ ಮಾಡ್ಬೇಕು ಅನ್ನೋದು ಗೊತ್ತು. ಇಲ್ಲಿ ಅವರು ತಮಗೆ ಬೇಕಾದ ಹಾಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ರಾಜುಗೌಡ ಹರಿಹಾಯ್ದಿದ್ದಾರೆ. ಮಂಗಳೂರಿನಲ್ಲಿ ನಡೆದ ಗಲಭೆ ರಾಜಕೀಯ ಪ್ರೇರಿತವಾದ್ದು ಎಂದೂ ಕುಮಾರಸ್ವಾಮಿಗೆ ಅವರು ಟಾಂಗ್ ಕೊಟ್ಟಿದ್ದಾರೆ.
ಪೊಲೀಸರು ವಿಡಿಯೋ ರಿಲೀಸ್ ಮಾಡಿದಾಗಲೇ ಕುಮಾರಸ್ವಾಮಿ ವಿಡಿಯೋ ರಿಲೀಸ್ ಮಾಡಬೇಕಿತ್ತು. ಪ್ರವಾಹ ವಿಚಾರವಾಗಿ ಏನಾದರೂ ಸಮಸ್ಯೆಗಳಿದ್ದರೆ ಕುಮಾರಸ್ವಾಮಿ ತೋರಿಸಲಿ. ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನ ಆಲಿಸಲಿ, ಗಲಭೆ ವಿಚಾರವಾಗಿ ಚೀಪ್ ಪಾಲಿಟಿಕ್ಸ್ ಮಾಡುವ ಬದಲು ದೀನ ದಲಿತರ ಪರವಾಗಿ ಕೆಲಸ ಮಾಡಿಲಿ ಎಂದು ಹೆಚ್ಡಿಕೆಗೆ ಸಲಹೆಯನ್ನೂ ನೀಡಿದರು.
ಸಂಪುಟ ವಿಸ್ತರಣೆ ವೇಳೆ ಕಲ್ಯಾಣ ಕರ್ನಾಟಕಕ್ಕೆ ಸಚಿವ ನೀಡುವ ಕುರಿತು ಮಾತನಾಡಿದ ಅವರು, ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಸಚಿವ ಸ್ಥಾನ ಕುರಿತು ಸಿಎಂ ಗೊಂದಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾವು ಹೆಚ್ಚಿನ ಗೊಂದಲ ಸೃಷ್ಟಿಸುವ ಕೆಲಸ ಮಾಡುವುದಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇವೆ. ಆದರೂ ಕೂಡ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ನೀಡಲು ಪ್ರಸ್ತಾಪ ಇಡಲಾಗಿದೆ ಎನ್ನುವ ಮೂಲಕ ಮುಖ್ಯಮಂತ್ರಿ ಬಿಎಸ್ವೈ ನಡೆಯನ್ನೂ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದರು.
ಇನ್ನ ಜೆಎನ್ಯು ಗೆ ಭೇಟಿ ನೀಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲ ಆ್ಯಕ್ಟರ್ಗಳು ಬಣ್ಣ ಹಚ್ಚಿ ಡೈರೆಕ್ಟರ್ ಹೇಳಿದಂತೆ ಆ್ಯಕ್ಟ್ ಮಾಡುತ್ತಾರೆ. ಅವರಿಗೆ ಸ್ವಂತ ಬುದ್ದಿ ಇರುವುದಿಲ್ಲ ಅಂತ ಟಾಂಗ್ ಕೊಟ್ಟಿದ್ದಾರೆ. ಕೆಲ ನಟ ನಟಿಯರು ತಮ್ಮ ಫೇಮ್ಗೆ ಏನು ಬೇಕೋ ಅದನ್ನಷ್ಟೆ ಮಾಡುತ್ತಾರೆ. ಹೀಗಾಗಿ ಚಿತ್ರ ನಟ ನಟಿಯರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಚಪಾಕ್ ಸಿನಿಮಾ ಚನ್ನಾಗಿದ್ದರೆ ಜನ ನೋಡುತ್ತಾರೆ. ದೀಪಿಕಾ ಪಡುಕೋಣೆ ನಟಿಸಿದ ಚಪಾಕ್ ಚಿತ್ರ ಬಹಿಷ್ಕಾರ ವಿಚಾರವಾಗಿ ನಾನೇನು ಹೇಳಲಾರೆ ಅಂತ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.