ಸುರಪುರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಕಥಾ ಹಂದರದ ಮಹಾನಾಯಕ ಧಾರಾವಾಹಿ ಬೆಂಬಲಿಸಿ ಹಸನಾಪುರ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಬ್ಯಾನರ್ ಹಾಕುವ ಮೂಲಕ ಧಾರಾವಾಹಿಗೆ ಬೆಂಬಲ ಸೂಚಿಸಲಾಯಿತು.
ಸಾವಿರಾರು ಜನ ಅಂಬೇಡ್ಕರ್ ಅಭಿಮಾನಿಗಳು ಸೇರಿ ಮಹಾನಾಯಕ ಧಾರಾವಾಹಿ ಬ್ಯಾನರ್ ಅನಾವರಣಗೊಳಿಸುವ ಜೊತೆಗೆ ಅಂಬೇಡ್ಕರ್ ಹಬ್ಬ ಎಂದು ವಿಶೇಷವಾಗಿ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಲ್ಯದಿಂದಲೂ ಪಟ್ಟ ಕಷ್ಟಗಳು ಹಾಗೂ ಅವರ ಆದರ್ಶ ಜೀವನದ ಕುರಿತು ಮಹಾನಾಯಕ ಧಾರಾವಾಹಿಯ ಮೂಲಕ ತೋರಿಸುತ್ತಿರುವುದು ಸಂತೋಷದಾಯಕವಾಗಿದೆ.
ಪ್ರತಿಯೊಬ್ಬರೂ ಈ ಧಾರಾವಾಹಿಯನ್ನು ನೋಡುವ ಜೊತೆಗೆ ಅಂಬೇಡ್ಕರ್ ಅವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ ಈ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆ ಮಾಡುತ್ತಿರುವುದನ್ನು ಅಂಬೇಡ್ಕರ್ ಅಭಿಮಾನಿಗಳು ಖಂಡಿಸುವ ಜೊತೆಗೆ ಎಲ್ಲರೂ ರಾಘವೇಂದ್ರ ಹುಣಸೂರು ಅವರಿಗೆ ಬೆಂಬಲಿಸುವುದಾಗಿ ತಿಳಿಸಿದರು.