ಯಾದಗಿರಿ: ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪಡೆದ ಸಾಲದ ಬಡ್ಡಿ ಹಣವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಒತ್ತಾಯಿಸಿದ್ದಾರೆ.
ನಗರದ ಸರ್ಕಾರಿ ಅಥಿತಿ ಗೃಹದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶವಿದ್ದರೂ ಬ್ಯಾಂಕ್ ಅಧಿಕಾರಿಗಳು ಶಿಕ್ಷಣಕ್ಕಾಗಿ ಪಡೆದ ಸಾಲಕ್ಕಾಗಿ, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಿರಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
2009 ಮತ್ತು 2014ರಲ್ಲಿ ಕೇಂದ್ರ ಸರ್ಕಾರ ಶೈಕ್ಷಣಿಕ ಸಾಲದ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಆದೇಶ ನೀಡಿದರೂ ಸಹ, ಬ್ಯಾಂಕ್ ಅಧಿಕಾರಿಗಳು ಮಾತ್ರ ಬಡ್ಡಿ ಮನ್ನಾ ಮಾಡದೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ಸಾಲ ಪಡೆದ ವಿದ್ಯಾರ್ಥಿಗಳು ಕಂತಿನ ರೂಪದಲ್ಲಿ ಕಟ್ಟಿದ ಹಣವನ್ನು ಬ್ಯಾಂಕ್ಗಳು ಬಡ್ಡಿ ದರದಲ್ಲಿ ಮುರಿದುಕೊಂಡಿವೆ. ಕೂಡಲೇ ಬ್ಯಾಂಕ್ಗಳು ಕೇಂದ್ರ ಸರ್ಕಾರದಿಂದ ಹಣ ಪಡೆದು ವಿದ್ಯಾರ್ಥಿಗಳ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು. ಈ ಹಿಂದೆ ಕಟ್ಟಿದ ಹಣವನ್ನು ಸಾಲದ ಅಸಲಿನಲ್ಲಿ ಜಮ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು
ವಿದ್ಯಾರ್ಥಿಗಳು ತಮ್ಮ ಸಾಲದ ಮಾಹಿತಿ ಒದಗಿಸಬೇಕು. ಈ ಕುರಿತು ಕಲಬುರಗಿ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೇ, ಜನವರಿ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.