ಯಾದಗಿರಿ: ಕೊರೊನಾ ವೈರಸ್ ಎಫೆಕ್ಟ್ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಮೂಕ ಪ್ರಾಣಿಗಳಿಗೂ ತಟ್ಟಿದೆ. ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಕೋತಿಗಳು ಆಹಾರಕ್ಕಾಗಿ ಪರದಾಡುತ್ತಿವೆ.
ಶಹಾಪುರ ಬೆಟ್ಟದಲ್ಲಿ ಬುದ್ಧ ಮಲಗಿರೋ ದೃಶ್ಯ ಮತ್ತು ಬುದ್ಧ ವಿಹಾರ ನೋಡಲು ಸಾಕಷ್ಟು ಪ್ರವಾಸಿಗರು ಬರುತ್ತಿದ್ದರು. ಬಂದ ಪ್ರವಾಸಿಗರು ಕೋತಿಗಳಿಗೆ ಹಣ್ಣು, ಆಹಾರ ನೀಡುತ್ತಿದ್ದರು. ಇದೀಗ ಕೊರೊನಾ ವೈರಸ್ನಿಂದ ಲಾಕ್ಡೌನ್ ಆದ ಹಿನ್ನೆಲೆ ಇಲ್ಲಿ ಯಾರೂ ಕಾಲಿಡುತ್ತಿಲ್ಲ. ಇದರಿಂದ ಕೋತಿಗಳು ತುತ್ತು ಅನ್ನಕ್ಕೂ ಪರದಾಡುವಂತ್ತಾಗಿದೆ.
ಆಹಾರ ಅರಸಿ ಕೋತಿಗಳು ಬೆಟ್ಟದಿಂದ ನಗರಕ್ಕೆ ಲಗ್ಗೆ ಇಟ್ಟಿವೆ. ಶಹಾಪುರ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ಊಟ ಮಾಡುವ ವೇಳೆ ಕೋತಿಯೊಂದು ಬಂದು ಅನ್ನಕ್ಕೆ ಮೊರೆ ಇಟ್ಟಿದೆ. ತಕ್ಷಣ ಆ ವ್ಯಕ್ತಿ ಕೋತಿಯ ಹಸಿವನ್ನು ಮನಗಂಡು ಕೈಯಲ್ಲಿರೋ ತುತ್ತು ಅನ್ನ ಹಾಕಿ ಮಾನವೀಯತೆ ಮೆರೆದಿದ್ದಾನೆ.
ಗುಡ್ಡದಲ್ಲಿರುವ ಕೋತಿಗಳು ಆಹಾರವಿಲ್ಲದೆ ಬಳಲಿ ಶೋಚನೀಯ ಸ್ಥಿತಿಯಲ್ಲಿವೆ. ಜಿಲ್ಲಾಡಳಿತ, ಅರಣ್ಯ ಇಲಾಖೆ, ಪುರಾತತ್ವ ಇಲಾಖೆ ಅಧಿಕಾರಿಗಳು ಕೋತಿಗಳಿಗೆ ಆಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.