ಯಾದಗಿರಿ: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರವಾಗಿ ಯಾದಗಿರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಇದರಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಅಸಹ್ಯಕರ ವಾತಾವರಣವಿದ್ದು, ಇಂತಹ ಪರಿಸ್ಥಿತಿಯಲ್ಲಿ ಯಾವ ಸಿಡಿ ಸತ್ಯ, ಸುಳ್ಳು ಎಂಬುದನ್ನು ತಿಳಿಯಲು ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಸಿಡಿ ಬಿಡುಗಡೆ ಮೂಲಕ ರಾಜ್ಯದ ಘನತೆ, ಗೌರವ, ಸಾಂಸ್ಕೃತಿಕ ಹಿರಿಮೆ ಗರಿಮೆ ಮಣ್ಣುಪಾಲಾಗುತ್ತಿದೆ. ರಾಜ್ಯದ ಘನತೆ ರಕ್ಷಣೆ ಮಾಡುವಂತಹ ಕೆಲಸ ಆಗಲಿ. 19ರಿಂದ 20 ಸಿಡಿ ಇರಲಿ, ಏನೇ ಸಿಡಿ ಇರಲಿ. ಆದ್ರೆ ಸತ್ಯಾಸತ್ಯತೆ ಎಲ್ಲವೂ ಹೊರಗೆ ಬರಲಿ ಅಂತ ಖಂಡ್ರೆ ಆಗ್ರಹಿಸಿದ್ದಾರೆ. ಇನ್ನು ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಖಂಡ್ರೆ, ಅವರು ನನಗೆ ಅತ್ಯಂತ ಆತ್ಮೀಯ ಸ್ನೇಹಿತರು. ಅವರು ನನ್ನ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ನಲ್ಲಿ ಸ್ವಾಗತ ಮಾಡುತ್ತೇವೆ. ಪಕ್ಷಕ್ಕೆ ಮಧು ಬಂಗಾರಪ್ಪ ಬಂದ್ರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರಲು ನಮ್ಮ ಸಂಪರ್ಕದಲ್ಲಿದ್ದಾರೆ. ಯಾರು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಾರೆಂದು ಬಹಿರಂಗವಾಗಿ ಹೆಸರು ಹೇಳಲ್ಲ. ಸಮಯ ಬಂದಾಗ ಹೆಸರು ಹೇಳುತ್ತೇನೆ ಎಂದರು.
ಓದಿ:ಬೆಂಗಳೂರಿನ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ, ಸಮೃದ್ಧಿಗಾಗಿ ಪ್ರಾರ್ಥನೆ
ಬಹಳಷ್ಟು ಜನ ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ಗೆ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಈಗಾಗಲೇ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್ ಬಿಟ್ಟು ಹೋದವರು ವಾಪಸ್ ಪಕ್ಷಕ್ಕೆ ಬಂದರೆ ಮತ್ತೆ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಯಾದಗಿರಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.