ಯಾದಗಿರಿ: ಬಿಜೆಪಿಯ ಠಾಣಗುಂದಿ ಮತಕ್ಷೇತ್ರದ ಸದಸ್ಯೆ ಲಲಿತಾ ಮರೆಪ್ಪ ಅವರು ಯಾದಗಿರಿ ತಾಲೂಕಾ ಪಂಚಾಯಿತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುಮಠಕಲ್ ಹೊಸ ತಾಲೂಕಾ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಮೇಲೆ ಇಲ್ಲಿನ ತಾಲೂಕಾ ಪಂಚಾಯತ ಉಪಾಧ್ಯಕ್ಷರಾಗಿದ್ದ ಜೆಡಿಎಸ್ ಪಕ್ಷದ ಅಜಲಾಪೂರ ತಾ.ಪಂ. ಸದಸ್ಯೆ ರಾಮಲಿಂಗಮ್ಮ ಕವಡಿ ಅವರ ಸ್ಥಾನ ತೆರವಾಗಿತ್ತು. ಪರಿಣಾಮ ಸೋಮವಾರ ನಡೆದ ತಾ.ಪಂ ಸಭಾಂಗಣದಲ್ಲಿ ನೂತನ ತಾಪಂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಿತು.
ಒಟ್ಟು 19 ಸದಸ್ಯರ ಬಲವಿರುವ ತಾಪಂ ಸದಸ್ಯರ ಪೈಕಿ ಬೆಜೆಪಿಯ 12 ಸದಸ್ಯರಿದ್ದರೆ, 6 ಕಾಂಗ್ರೆಸ್ ಹಾಗೂ ಓರ್ವ ಜೆಡಿಎಸ್ ಸದಸ್ಯರಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಬಿಜೆಪಿಯ ಠಾಣಗುಂದಿ ಮತಕ್ಷೇತ್ರದ ತಾ.ಪಂ ಸದಸ್ಯೆ ಲಲಿತಾ ಮರೆಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ ನಾಮಪತ್ರ ಪರಿಶೀಲಿಸಿ ಲಲಿತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಉಪಸ್ಥಿತರಿದ್ದರು. ಸಭೆಯಲ್ಲಿ ಬಿಜೆಪಿಯ 12 ತಾ.ಪಂ ಸದಸ್ಯರು ಹಾಗೂ ಕಾಂಗ್ರೆಸ್ನ ವರ್ಕನಳ್ಳಿ ತಾ.ಪಂ ಸದಸ್ಯೆ ಯಂಕಪ್ಪ ಸೇರಿದಂತೆ 13 ಸದಸ್ಯರು ಭಾಗವಹಿಸಿದ್ದರು. ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಾಧ್ಯಕ್ಷರನ್ನು ಸನ್ಮಾನಿಸಿದರು.