ಯಾದಗಿರಿ: ಕೊರೊನಾ ವೈರಸ್ ತಡೆಗಟ್ಟಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರುಣೆ ಇಲ್ಲದ ಸರ್ಕಾರ ಎಂದು ಹೇಳಿದರು.
ಯಾವುದೇ ಪೂರ್ವಭಾವಿ ಸಿದ್ಧತೆಯಿಲ್ಲದೆ ಲಾಕ್ಡೌನ್ ಮಾಡುವ ಮೂಲಕ ದೇಶದ ವಲಸೆ ಕಾರ್ಮಿಕರು, ರೈತರು, ದುರ್ಬಲ ವರ್ಗದವರು, ಮಹಿಳೆಯರು ಸಂಕಷ್ಟ ಅನುಭವಿಸುವಂತಾಯಿತು. ಇಡೀ ದೇಶ ಕೊರೊನಾ ವೈರಸ್ನಿಂದ ತತ್ತರಿಸಿ ಹೋಗಿದೆ. ನಮ್ಮ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸರ್ಕಾರಕ್ಕೆ ಕೊರೊನಾ ವೈರಸ್ನಿಂದಾಗುವ ಅನಾಹುತಗಳ ಬಗ್ಗೆ ಸಲಹೆ ಕೂಡ ನೀಡಿದ್ದರು. ಆದರೆ ಕೇಂದ್ರ ಸರ್ಕಾರ ನಮ್ಮ ನಾಯಕರ ಸಲಹೆಯನ್ನು ಹಗುರವಾಗಿ ಪರಿಗಣಿಸಿದೆ ಎಂದರು.
ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳದೆ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ಇಡೀ ದೇಶ ಸಂಕಷ್ಟ ಅನುಭವಿಸುವಂತಾಗಿದೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದೂರಿದರು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವುದು ಅಂಗೈಯಲ್ಲಿ ಅರಮನೆ ತೋರಿಸಿದ ಹಾಗಿದೆ. ಇದರಿಂದ ಯಾರಿಗೂ ಉಪಯೋಗವಾಗಿಲ್ಲ. ಸಾಲ ಕೊಡುವುದಕ್ಕೆ ಪ್ಯಾಕೇಜ್ ಅಂತಿರಾ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪೀಕ್ ಅಪ್ ಇಂಡಿಯಾ ಅನ್ನೋ ಅಭಿಯಾನ ಪ್ರಾರಂಭಿಸಿದ್ದು, ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬಾರದ ವ್ಯಕ್ತಿಗಳನ್ನು ಗುರುತಿಸಿ ಅವರ ಖಾತೆಗೆ ಶೀಘ್ರವಾಗಿ 10 ಸಾವಿರ ರೂ. ಜಮಾ ಮಾಡಬೇಕು. ಈ ಮೂಲಕ 6 ತಿಂಗಳವರೆಗೆ ಅವರ ಖಾತೆಗೆ 7.5 ಸಾವಿರ ರೂ. ನೀಡಬೇಕೆಂದು ಈ ಮೂಲಕ ನಮ್ಮ ಪಕ್ಷದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.