ಗುರುಮಠಕಲ್(ಯಾದಗಿರಿ) : ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಪುಟ್‌ಪಾಕ್ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಸತೀಶ್ ಕುಮಾರ ತಂಬಾಕೆ ಹಾಗೂ ರವಿಶಂಕರ್ ಅವರ ಕುಟುಂಬ ವರ್ಗದವರನ್ನು ಭೇಟಿಯಾದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸಾಂತ್ವನ ಹೇಳಿದರು.
ರವಿಶಂಕರ್ ಅವರ ಸಂಬಂಧಿಯೊಬ್ಬರು ಲಂಡನ್ಗೆ ಪ್ರಯಾಣಿಸುತ್ತಿದ್ದ ಹಿನ್ನೆಲೆ ಅವರು ಹೈದರಾಬಾದ್ ಏರ್ಪೋರ್ಟ್ಗೆ ಬಿಟ್ಟು ವಾಪಸ್ ಬರುವಾಗ ತೆಲಂಗಾಣದಲ್ಲಿ ನಡೆದ ಅಪಘಾತದಲ್ಲಿ ಸತೀಶ್ ಹಾಗೂ ರವಿಶಂಕರ್ ಮೃತಪಟ್ಟರೆ ರವಿಶಂಕರ್ ಅವರ ಪತ್ನಿ ತ್ರಿವೇಣಿ ಹಾಗೂ ಮತ್ತೋರ್ವ ವ್ಯಕ್ತಿ ಬ್ರಹ್ಮಯ್ಯ ಗಾಯಗೊಂಡಿದ್ದರು. ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಿಯಾಂಕ್ ಖರ್ಗೆ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಮಾಜಿ ಜಿಪಂ ಅಧ್ಯಕ್ಷ ಶ್ರೇಣ ಕುಮಾರ ಧೋಖಾ, ಮಾಜಿ ತಾಪಂ ಅಧ್ಯಕ್ಷ ಬಾಸು ರಾಠೋಡ್, ಕೆಪಿಸಿಸಿ ಜಿಲ್ಲಾ ವಕ್ತಾರರಾದ ನರಸಿಂಹ ರೆಡ್ಡಿ ಚಂಡ್ರಿಕಿ ಹಾಗೂ ಇತರರಿದ್ದರು.