ಯಾದಗಿರಿ: ರಾಜ್ಯ ರೈತ ಸಂಘ ಇನ್ನು ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಪುಂಡ ಪೋಕರಿಗಳು ಶಾಸಕರಾಗಿ ವಿಧಾನಸಭೆಗೆ ಹೋಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರೈತರು ಸಹ ವಿಧಾನಸಭೆ ಪ್ರವೇಶಿಸಬೇಕೆನ್ನುವ ಮಹತ್ವಾಕಾಂಕ್ಷೆ ಇದೆ ಎಂದರು.
ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತ ಸಂಘದಿಂದ ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ರೈತರು ಕಣಕ್ಕಿಳಿಯುತ್ತಿದ್ದಾರೆ. ವ್ಯವಸ್ಥೆಯನ್ನು ಸರಿಪಡಿಸಲು ರೈತರೂ ಕೂಡ ವಿಧಾನಸೌಧಕ್ಕೆ ಹೋಗಬೇಕಾಗಿದೆ ಎಂದರು.
ಮುಂದಿನ ವಿಧಾನಸಭೆ ಕುರಿತು ಈಗಾಗಲೇ ಸಂಘಟನೆ ಮಾಡುತ್ತಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನಮಗೆ ರಾಜ್ಯ ರಾಜಕಾರಣ ಚೆನ್ನಾಗಿ ಗೊತ್ತಿದೆ. ಹಸಿರು ಶಾಲು ಹಾಕಿ 40 ವರ್ಷ ಆಗಿದೆ ಎಂದು ಹೇಳಿದರು.
ಇದೇ ವೇಳೆ, ನಾವು ರೈತರ ಸಾಲ ಮನ್ನಾ ಮಾಡುತ್ತೇವೆ, ಬೆಳೆಗೆ ಯೋಗ್ಯ ಬೆಲೆ ನಿಗದಿ ಮಾಡುತ್ತೇವೆ ಎಂದು ಕೋಡಿಹಳ್ಳಿ ತಿಳಿಸಿದರು.
ಇದನ್ನೂ ಓದಿ: ಡಿಜಿಟಲ್ ವಿಶ್ವಕ್ಕೆ ಭಾರತವೇ ಗುರು: ಸ್ಪೀಕರ್ ಓಂ ಬಿರ್ಲಾ