ಯಾದಗಿರಿ: ಸ್ಮಶಾನ ಭೂಮಿ ವಿಚಾರದಲ್ಲಿ ಶುರುವಾದ ಜಗಳ ಕೈ ಕೈ ಮಿಲಾಯಿಸುವವರೆಗೂ ಹೋಗಿದ್ದು, ಸವರ್ಣೀಯರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಯಾದಗಿರಿ ತಾಲೂಕಿನ ಕಾಡಂಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಸಾರ್ವಜನಿಕ ಹಾಗೂ ದಲಿತರ ಉಪಯೋಗಕ್ಕಾಗಿ ಸ್ಮಶಾನ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಿಲ್ಲಾಡಳಿತ ಭೂಮಿ ಮಂಜೂರು ಮಾಡಿತ್ತು ಎನ್ನಲಾಗಿದೆ.
ಮಂಜೂರಾದ ರುದ್ರ ಭೂಮಿಯನ್ನು ವಿರೋಧಿಸಿ ಗ್ರಾಮದ ಕೆಲವು ಪ್ರಮುಖರು ದಲಿತ ಸಮುದಾಯದವರ ಜೊತೆ ವೈಷ್ಯಮ್ಯ ಬೆಳೆಸಿಕೊಂಡು, ಮಂಜೂರಾದ ಭೂಮಿಯಲ್ಲಿ ಸವರ್ಣೀಯರು ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಶೆಡ್ ನಿರ್ಮಾಣ ಮಾಡಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಸಂಗ್ರಹಿಸಿದ ಮರಳು ಹಾಗೂ ಶೆಡ್ ತೆರವುಗೊಳಿಸುವಂತೆ ದಲಿತರು ಸವರ್ಣೀಯರಿಗೆ ಹೇಳಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಯಾದಗಿರಿಯ ವಡಗೇರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.