ಯಾದಗಿರಿ (ಗುರುಮಠಕಲ್): ಗುರುಮಠಕಲ್ ಮತ ಕ್ಷೇತ್ರದಲ್ಲಿರು ಕಿಲ್ಲನಕೇರಾ ಗ್ರಾಮಸ್ಥರು ಸ್ವತಃ ತಾವೇ ಚರಂಡಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಗ್ರಾಮ ಪಂಚಾಯತ್ ಬಾಗಿಲ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಲ್ಲನಕೇರಾ ಗ್ರಾಮದ ಎರಡನೇ ವಾರ್ಡ್ನ ಬೀದಿಯ ಚರಂಡಿಗಳಲ್ಲಿ ಕಸ ಕಡ್ಡಿ, ಹೂಳು ತುಂಬಿಕೊಂಡಿದ್ದು, ಇದರಿಂದ ಕೊಳಚೆ ನೀರು ನಿಲ್ಲುವುದರಿಂದ ಅಲ್ಲಿನ ನಿವಾಸಿಗಳು ಸೊಳ್ಳೆಗಳ ಕಾಟದಿಂದ ನಿತ್ಯ ಹಿಂಸೆ ಅನುಭವಿಸುವಂತಾಗಿದೆ. ಅಷ್ಟೇ ಅಲ್ಲದೆ, ಕಲುಷಿತ ನೀರು ರಸ್ತೆಗಳಲ್ಲಿ ಹರಿಯುವುದರಿಂದ ಗಬ್ಬು ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಜನರು ರೋಗ ಹರಡುವ ಭೀತಿಯಲ್ಲಿ ಓಡಾಡುವಂತಾಗಿದೆ. ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡದೆ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತ್ಯಾಜ್ಯವನ್ನು ಗ್ರಾಮ ಪಂಚಾಯತ್ ಬಾಗಿಲ ಮುಂದೆ ಸುರಿದಿದ್ದಾರೆ.
ಓದಿ: ಮಳೆ ನಡುವೆಯೂ ಕಾವೇರಿದ ಪ್ರತಿಭಟನೆ: ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ
ಈ ಸಂದರ್ಭದಲ್ಲಿ ಗ್ರಾಮಸ್ಥ ಬೀರಲಿಂಗಪ್ಪ ಎದ್ದೇರಿ ಮಾತನಾಡಿ, ಸುಮಾರು ದಿನಗಳಿಂದ ಚರಂಡಿಯಲ್ಲಿ ಹೂಳು ತುಂಬಿದೆ. ಪ್ರತಿಸಲ ಚರಂಡಿಯನ್ನು ನಾವೇ ಸ್ವಚ್ಛ ಮಾಡುತ್ತೇವೆ. ನಮ್ಮೂರಲ್ಲಿ ಅಧಿಕಾರಿಗಳು ಇದ್ದಾರೆಯೇ ಎಂದು ಅನುಮಾನ ವ್ಯಕ್ತವಾಗುತ್ತಿದೆ. ತ್ಯಾಜ್ಯವನ್ನು ಗ್ರಾಮ ಪಂಚಾಯತ್ ಮುಂದೆ ಹಾಕುತ್ತಿರುವುದು ಮೊದಲನೇ ಹಂತವಾಗಿದೆ. ಮತ್ತೆ ನಿರ್ಲಕ್ಷ್ಯ ವಹಿಸಿದರೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆಯೂ ಹಾಕಬೇಕಾಗುತ್ತದೆ. ಇದು ನಾವು ಮಾಡುತ್ತಿರುವ ಮನವಿ ಹಾಗೂ ಎಚ್ಚರಿಕೆಯಾಗಿದೆ ಎಂದರು.