ಸುರಪುರ: ತಾಲೂಕಿನ ಕೆಂಭಾವಿಯ ಯುವ ಪತ್ರಕರ್ತನ ವಿರುದ್ಧ ಖಾಸಗಿ ವಾಹಿನಿಯೊಂದು ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆರೋಪಿಸಿದ್ದಾರೆ.
ಕೆಂಭಾವಿಯ ಯುವ ಪತ್ರಕರ್ತ ವಿರೇಶರೆಡ್ಡಿ ಯಾಳಗಿ ಮೇಲೆ ಖಾಸಗಿ ವಾಹಿನಿಯೊಂದು ಕೋವಿಡ್-19ಗೆ ಸಂಬಂಧಿಸಿದಂತೆ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆರೋಪಿಸಿದ್ದಾರೆ.
ಕೆಂಭಾವಿ ಉಪತಹಶೀಲ್ದಾರ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ಸಂಚಾಲಕ ಮರೇಪ್ಪ ಗೌಂಡಿ ಮಾತನಾಡಿ, ಹಳೆಯ ವೈಷಮ್ಯವನ್ನು ಪತ್ರಿಕಾರಂಗಕ್ಕೆ ಎಳೆದು ತರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಕೊವಿಡ್ - 19 ಪ್ರಕರಣದಲ್ಲಿ ಸುಳ್ಳು ಸುದ್ದಿಗೆ ಫೋಟೋ, ಹೆಸರು ಬಳಸಿಕೊಂಡು ತೇಜೋವಧೆ ಮಾಡುವ ಹುನ್ನಾರ ನಡೆದಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಸುಳ್ಳು ಸುದ್ದಿ ಪ್ರಸಾರಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.