ಸುರಪುರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಲ್ಯಾಣ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಜನ ಸೇನಾ ಮುಖಂಡರು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಇದಕ್ಕೆ ಸ್ಪಂದಿಸಬೇಕು ಎಂದು ಜನ ಸೇನಾ (ರಿ) ಸಂಘಟನೆಯ ರಾಜ್ಯಾಧ್ಯಕ್ಷ ಮೈಲಾರಪ್ಪ ಜಾಗೀರದಾರ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಭಾಗದಲ್ಲಿ ಪ್ರಮುಖವಾಗಿ ಜನರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಲ್ಲಿ ಕರ್ನಾಟಕವನ್ನು ಕೈಬಿಟ್ಟಿರುವುದು ಸರಿಯಲ್ಲ. ಕೂಡಲೇ ಸೇರ್ಪಡೆ ಮಾಡಿಕೊಂಡು ಯೋಜನೆಗಳ ಲಾಭವನ್ನು ಬಡ ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸಂವಿಧಾನದ 271 ನೇ ಜೆ ಕಲಂ ತಿದ್ದುಪಡಿ ಮಾಡಲಾಯಿತು. ಆದರೆ ಅನುಷ್ಠಾನದಲ್ಲಿರುವ ಕೆಲ ನ್ಯೂನ್ಯತೆಗಳಿಂದ ಅದರ ಲಾಭ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಯಾದಗಿರಿ ತಾಲೂಕಿನಲ್ಲಿ ಸರ್ಕಾರದಿಂದ ಭೀಮಾನದಿಯಿಂದ ಗ್ರಾಮೀಣ ಭಾಗದ ಕರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದೆ. ಅದು ಕಳಪೆ ಮಟ್ಟದಿಂದ ಕೂಡಿದೆ ಎಂದು ದೂರಿದರು.
6 ಜಿಲ್ಲೆಗಳು ಗಡಿಭಾಗಕ್ಕೆ ಹೊಂದಿಕೊಂಡಿವೆ. ಇಲ್ಲಿ ಶಿಕ್ಷಣ ಪ್ರಗತಿಗಾಗಿ ಸರ್ಕಾರ ಒತ್ತು ನೀಡಿ ಬದಲಾವಣೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾರ್ಥಂಡಪ್ಪ, ಹೊನಪ್ಪ ಮುಷ್ಟೂರ್, ಅಶೋಕ ಐಕೂರ್, ಸುಭಾಶಂದ್ರ ಬಡಿಗೇರಾ, ಮಂಜು ಬಾಚವಾರ ಇತರರು ಇದ್ದರು.